ತಂತ್ರಜ್ಞಾನದ ಸಮರ್ಪಕ ಬಳಕೆಗೆ ಅರಿವು ಅತ್ಯಗತ್ಯ; ಜಿಲ್ಲಾಧಿಕಾರಿ ಟಿ. ಭೂಬಾಲನ್

WORKSHOP IN ZP
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಂತರ್ಜಾಲ ಜಾಗೃತಿ ಕುರಿತ ಕರಪತ್ರ ಬಿಡುಗಡೆಗೊಳಿಸಿದರು. ವಿಜಯಕುಮಾರ ಆಜೂರ, ನಿಂಗಪ್ಪ ಗೋಠೆ, ಬಿ.ಎಸ್. ರಾಠೋಡ ಮತ್ತಿತರರಿದ್ದಾರೆ.
Published on

ವಿಜಯಪುರ: ಅಂತರ್ಜಾಲವು ಒಂದು ಶಕ್ತಿಯುತ ಸಾಧನವಾಗಿದೆ. ಸರಿಯಾದ ಬಳಕೆಯು ಜೀವನವನ್ನು ಸುಲಭಗೊಳಿಸಬಹುದಾಗಿದ್ದು, ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಸಮರ್ಪಕ ಬಳಕೆಗೆ ಅರಿವು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಂಯುಕ್ತಾಶ್ರದಲ್ಲಿ ಸುರಕ್ಷಿತ ಅಂತರ್ಜಾಲ ದಿನದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕ ಜಗತ್ತಿನಲ್ಲಿ ಅಂತರ್ಜಾಲವು ಮಾನವ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇದರ ನಡುವೆಯೇ ವಿವಿಧ ಮಾದರಿಗಳಲ್ಲಿ ಸೈಬರ್ ವಂಚನೆ ನಡೆಯುತ್ತಿದೆ. ಸೈಬರ್ ವಂಚನೆಗಳನ್ನು ತಡೆಗಟ್ಟಲು ಸಾರ್ವಜನಿಕರು ಜಾಗೃತಿ ಹೊಂದಬೇಕು. ದತ್ತಾಂಶ ಹಾಗೂ ಮಾಹಿತಿಯ ಸಂರಕ್ಷಣೆಯ ಅರಿವು ಹೊಂದುವುದು ಅತ್ಯವಶ್ಯಕವಾಗಿದೆ. ಸಮರ್ಪಕವಾಗಿ ಅರಿವು ಹೊಂದಿದಾಗ ಮಾತ್ರ ಸೈಬರ್ ವಂಚನೆಯನ್ನು ತಪ್ಪಿಸಬಹುದಾಗಿದೆ ಎಂದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಗಳಲ್ಲಿ ತಮ್ಮ ವೈಯಕ್ತಿಕ ಲಾಗಿನ್‌ಗಳ ಬಗ್ಗೆ ಅರಿವು ಹೊಂದಿ ಸುರಕ್ಷಿತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಬೇರೆಯವರಿಗೆ ಮಾಹಿತಿ ಹಂಚಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಅಂತರ್ಜಾಲವು ಮಾಹಿತಿಯ ಆಗರವಿದ್ದು, ಅದರ ಬಳಕೆ ಕುರಿತು ಸ್ವಯಂ ಅರಿವು ಹೊಂದಬೇಕು. ಸೈಬರ್ ಅಪರಾಧಗಳ ಕುರಿತಾಗಿ ಗ್ರಾಮೀಣ ಭಾಗದ ಜನರಿಗೆ ಸೂಕ್ತ ತಿಳಿವಳಿಕೆ ನೀಡುವ ಜನಜಾಗೃತಿ ಕಾರ್ಯಕ್ರಮ ಜಿಲ್ಲೆಯಲ್ಲಿ ಹಮ್ಮಿಕೊಂಡು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲಾಗುವುದು ಎಂದರು.

ಇಂದಿನ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬರು ಯಾವುದಾದರೊಂದು ತಂತ್ರಜ್ಞಾನದ ಬಳಕೆ ದಿನನಿತ್ಯ ಮಾಡುತ್ತಿದ್ದಾರೆ. ಇದರ ಸಮರ್ಪಕ ಬಳಕೆಯಾಗಬೇಕು. ಇದರ ದುರುಪಯೋಗವಾಗದಂತೆ, ಯಾವುದೇ ಸೈಬರ್ ವಂಚನೆಗಳಿಗೆ ಅವಕಾಶ ನೀಡದೇ, ಮೊಬೈಲ್ ಸೇರಿದಂತೆ ತಂತ್ರಜ್ಞಾನದ ಸೂಕ್ತ ಅರಿವು ಹೊಂದಬೇಕು. ಸಂಶಯಾಸ್ಪದ ಕರೆಗಳಿಗೆ ಸ್ಪಂದಿಸದೇ, ಯಾವುದೇ ವೈಯಕ್ತಿಕ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ತಂತ್ರಜ್ಞಾನದ ಸಂಪೂರ್ಣ ಮಾಹಿತಿಯನ್ನು ಅರಿತುಕೊಂಡು ಜಾಗರೂಕತೆಯಿಂದ, ಸಮರ್ಪಕವಾಗಿ ಬಳಕೆ ಮಾಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಲ್ತಾಬ್ ಬಾಲಸಿಂಗ್ ಮಾತನಾಡಿದರು.

ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಮುಖ್ಯ ಲೆಕ್ಕಪತ್ರಾಧಿಕಾರಿ ರಾಮಣ್ಣ ಅಥಣಿ, ಎನ್‌ಐಸಿ ಅಧಿಕಾರಿ ಶಿವಾನಂದ ಗೂಗವಾಡ ಮತ್ತಿತರರಿದ್ದರು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅಂತರ್ಜಾಲ ಜಾಗೃತಿ ಕುರಿತ ಕರಪತ್ರ ಬಿಡುಗಡೆಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net