

ಮಂಗಳೂರು: ಎಷ್ಟೇ ಜಾಗೃತಿ ಮೂಡಿಸಿದರೂ ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಎಸೆಯುವವರ ಕುಕೃತ್ಯ ಅಂತ್ಯವಾಗುತ್ತಿಲ್ಲ. ಇದರಿಂದ ಮನನೊಂದ ಯುವಕನೋರ್ವ ಪರಿಸರ ರಕ್ಷಣೆಗಾಗಿ ತನ್ನ ನಿತ್ಯದ ಜೀವನದಲ್ಲಿ ಬೆಳಗಿನ 4 ತಾಸು ಸಮಯ ಮೀಸಲಿಟ್ಟು, ಒಬ್ಬಂಟಿ ಹೋರಾಟ ನಡೆಸುತ್ತಿದ್ದಾನೆ.
‘ಹಸಿರು ದಳ’ ಎಂಬ ಸರ್ಕಾರೇತರ ಸಂಸ್ಥೆ(ಎನ್‌ಜಿಒ)ಯ ಸದಸ್ಯನೂ ಆಗಿರುವ ಬಜಾಲ್‌ನ ನಾಗರಾಜ ಅಂಚನ್ ಎಂಬ ಯುವಕ ಕಳೆದ ಎರಡೂವರೆ ತಿಂಗಳಿಂದ ಹೆದ್ದಾರಿ ಬದಿಯಲ್ಲಿ ಲಕ ಹಿಡಿದು ನಿಲ್ಲುತ್ತಿದ್ದಾರೆ. ಕಸ ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಮುಂಜಾನೆ ಬೆಳಕು ಹರಿಯುವ ಮೊದಲೇ 5.30ರ ವೇಳೆಗೆ ಮಂಗಳೂರು ನಗರದ ಹೊರವಲಯದ ಅಡ್ಯಾರು ಕಟ್ಟೆ ಸಮೀಪದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲುತ್ತಾರೆ. ಈ ಮಾರ್ಗದಲ್ಲಿ ಸಂಚರಿಸುವ ಬಹುತೇಕರು ಈ ಯುವಕನನ್ನು ನೋಡಿರಬಹುದು. ‘ರಸ್ತೆ ಬದಿ ಕಸ ಎಸೆಯಬೇಡಿ’ ಹಾಗೂ ‘ಜಾಗ್ರತೆ… ಪಕ್ಕದಲ್ಲೇ ನದಿ ಹರಿಯುತ್ತಿದೆ. ಕಸ ಎಸೆಯಬೇಡಿ’ ಎಂಬ ಬರಹವಿರುವ ಫಲಕ ಹಿಡಿದು ಜಾಗೃತಿ ಮೂಡಿಸುತ್ತಾರೆ. 9.30ರ ತನಕ ದಿನಂಪ್ರತಿ ಸುಮಾರು ನಾಲ್ಕು ಗಂಟೆ ಏಕಾಂಗಿಯಾಗಿ ನಿಂತಿರುತ್ತಾರೆ. ಬಳಿಕ ಅವರು ಎನ್‌ಜಿಒ ಕೆಲಸಕ್ಕೆ ತೆರಳುತ್ತಾರೆ.
ಆರಂಭದಲ್ಲಿ ಈ ಯುವಕನಿಗೆ ಹುಚ್ಚು ಎಂದು ನಿರ್ಲಕ್ಷಿಸಿದವರೇ ಹೆಚ್ಚು. ಹಲವರು ಶ್ಲಾಸಿರಬಹುದು. ಕೆಲವರು ಯುವಕನನ್ನು ಮಾತನಾಡಿಸಿ, ಇಲ್ಲಿ ಕಸ ಎಸೆಯುತ್ತಿದ್ದೆವು. ಇನ್ನು ಮುಂದೆ ಎಸೆಯಲ್ಲ ಎಂದು ಹೇಳಿ ಹೋದವರೂ ಇದ್ದಾರೆ. ಯುವಕನ ಪರಿಸರ ರಕ್ಷಣೆಯ ಬದ್ಧತೆ ಕಂಡು ಶಾಲೆಯೊಂದರ ಆಡಳಿತ ಮಂಡಳಿ ಇತ್ತೀಚೆಗೆ ಇವರನ್ನು ಆಹ್ವಾನಿಸಿ ಮಕ್ಕಳಿಗೆ ಪರಿಸರದ ಪಾಠ ಹೇಳಿಸಿದೆ.
ರಸ್ತೆ ಬದಿಯಲ್ಲಿ ಲಕ ಹಿಡಿದು ನಿಂತಕೂಡಲೇ ಎಲ್ಲವೂ ಬದಲಾಗುತ್ತದೆ ಎನ್ನುವ ಭ್ರಮೆ ತನಗಿಲ್ಲ ಎನ್ನುವ ನಾಗರಾಜ, ಈ ನಿಟ್ಟಿನಲ್ಲಿ ಜನತೆಯ ನಡುವೆ ಒಂದು ಗಂಭೀರವಾದ ಚರ್ಚೆ ಆರಂಭವಾಗಬೇಕು ಎನ್ನುವುದು ಉದ್ದೇಶ ಹೊಂದಿದ್ದಾಗಿ ತಿಳಿಸುತ್ತಾರೆ. ಈ ವಿಚಾರವಾಗಿ ವಿಧಾನಸಭಾ ಸ್ಪೀಕರ್, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನೂ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಬಿಸಾಡುವ ಹೆಚ್ಚಿನವರು ಮುಂಜಾನೆ ಬೆಳಕು ಹರಿಯುವ ಸಂದರ್ಭದಲ್ಲೇ ಈ ಕೆಲಸ ಮಾಡುತ್ತಾರೆ. ಹೀಗಾಗಿಯೇ ನಾಗರಾಜ ಅಂಚನ್ ಬೆಳಗಿನ ನಸುಕಿನ ಸಮಯದಲ್ಲೇ ಹೆದ್ದಾರಿಯ ಬಳಿ ಬಂದು ನಿಲ್ಲುತ್ತಾರೆ. ತಿಂಗಳ ಹಿಂದೆ ತ್ಯಾಜ್ಯ ರಾಶಿಯಿಂದ ಮೂಗು ಮುಚ್ಚಿಕೊಂಡು ಹೋಗಬೇಕಾಗಿದ್ದ ಹೆದ್ದಾರಿಯೀಗ ಸ್ವಚ್ಛವಾಗಿದೆ. ಇಲ್ಲಿಗೆ ಸಮಸ್ಯೆ ಬಗೆಹರಿದಿಲ್ಲ ಎಂಬುದು ಯುವಕ ಅಂಚನ್‌ಗೂ ತಿಳಿದಿದೆ. ಮುಂಜಾನೆ ಇಲ್ಲಿ ಯಾರೂ ಇಲ್ಲ ಎಂದರೆ ಮತ್ತೆ ತ್ಯಾಜ್ಯ ಎಸೆಯುತ್ತಾರೆ. ಅದಕ್ಕಾಗಿ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ, ಸರ್ಕಾರದ ಮಟ್ಟದಲ್ಲಿ ಗಟ್ಟಿಯಾದ ತೀರ್ಮಾನ ಬೇಕು ಎಂಬುದು ಪರಿಸರಕ್ಕೆ ಸರ್ಪಗಾವಲು ಹಾಕಿರುವ ಯುವಕನ ಮನದಿಂಗಿತ.
ಒಂದು ಸಣ್ಣ ಜನವರ್ಗ ಕಸ ಎಸೆಯುವುದರಿಂದ ಇಡೀ ಊರಿನ ಹೆಸರು ಹಾಳಾಗುತ್ತದೆ. ಕಸ ಎಸೆಯುವುದು, ಸ್ವಚ್ಛಗೊಳಿಸುವುದು ಇದನ್ನೇ ಮಾಡುವುದು ಸರಿಯಾದ ಕ್ರಮವಲ್ಲ. ಇದಕ್ಕೊಂದು ಶಾಶ್ವತ ಪರಿಹಾರ ಅಗತ್ಯ. ನನ್ನ ಊರು, ನನ್ನ ರಸ್ತೆ, ನನ್ನ ಪರಿಸರ ಎನ್ನುವ ಸಾಮಾಜಿಕ ಜವಾಬ್ದಾರಿ, ಬದ್ಧತೆ ಪ್ರತಿಯೊಬ್ಬರಲ್ಲೂ ಬರಬೇಕು.- ನಾಗರಾಜ ಅಂಚನ್, ಹಸಿರು ದಳ ಸದಸ್ಯ