

ಹನೂರು: ಕೃಷಿಯಲ್ಲಿ ಕ್ಷೀಣಿಸುತ್ತಿರುವ ದೇಸಿ ತಳಿಯ ಬೆಳೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹನೂರು ಹೋಬಳಿ ವ್ಯಾಪ್ತಿಯ ಗ್ರಾಮಗಳ ರೈತರ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದ್ದು, ರೈತರನ್ನು ಉತ್ತೇಜಿಸಲಾಗುತ್ತಿದೆ.
ದೇಸಿ ತಳಿಯ ಬೆಳೆಗಳಾದ ರಾಗಿ, ಜೋಳ, ತೊಗರಿ, ಹುರುಳಿ, ಅವರೆ, ಅಲಸಂದೆ, ಹುಚ್ಚೆಳ್ಳು, ಎಳ್ಳು, ನವಣೆ, ಸಾಮೆ, ಊದಲು, ಕೊರಳೆ, ಬರಗು ಹೆಚ್ಚು ಪೌಷ್ಟಿಕಾಂಶ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಆರೋಗ್ಯದ ದೃಷ್ಟಿಯಿಂದ ಉತ್ತಮ ಆಹಾರ ಧಾನ್ಯಗಳಾಗಿವೆ. ಈ ಬೆಳೆಗಳು ರೈತರ ಸಾಂಪ್ರದಾಯಿಕ ಹಾಗೂ ಪರಂಪರೆಯ ಬೆಳೆಗಳಾಗಿದ್ದು, ವಿಶಿಷ್ಟ ಗುಣಲಕ್ಷಣ ಹೊಂದಿದೆ. ಹನೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಸೇರಿದಂತೆ 7,553 ಹೆಕ್ಟೇರ್ ಪ್ರದೇಶ ಕೃಷಿ ಭೂಮಿ ಇದ್ದು, ಈ ಹಿಂದೆ ರೈತರು ದೇಸಿ ತಳಿಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಜತೆಗೆ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಮುಂದಿನ ತಲೆಮಾರಿಗೆ ಸಂರಕ್ಷಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಬೆಳೆಗಳನ್ನು ಬೆಳೆಯುವ ಪ್ರಮಾಣ ಕ್ಷೀಣಿಸುತ್ತಿದ್ದು, ನಶಿಸು ಹೋಗುವ ತವಕದಲ್ಲಿದೆ. ಹಾಗಾಗಿ ದೇಸಿ ತಳಿಯ ಬೆಳೆಗಳನ್ನು ಸಂರಕ್ಷಿಸಬೇಕಿದ್ದು, ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಈ ದೆಸೆಯಲ್ಲಿ ಹನೂರು ಕೃಷಿ ಅಧಿಕಾರಿ ನಾಗೇಂದ್ರ ಹಾಗೂ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ತೆರಳಿ ದೇಸಿ ತಳಿಗಳ ಮಹತ್ವದ ಬಗ್ಗೆ ಪ್ರಚಾರ ಕೈಗೊಳ್ಳುವುದರ ಮೂಲಕ ಅರಿವು ಮೂಡಿಸಲಾಗುತ್ತಿದ್ದು, ತಳಿಗಳ ಉಳಿವಿನ ಸರ್ಕಾರದ ಯೋಜನೆಯನ್ನೂ ಅನುಷ್ಠಾನಗೊಳಿಸಲಾಗುತ್ತಿದೆ.
ರೈತರ ಸ್ಥಿತಿ ಸ್ಥಾಪಕತ್ವವನ್ನು ಸುಧಾರಿಸುವ ಮೂಲಕ ಸ್ಥಳೀಯ ಕೃಷಿ ಪದ್ಧತಿ ಅನುಗುಣವಾಗಿ ರೈತರು ದೇಸಿ ತಳಿಗಳನ್ನು ಸಂರಕ್ಷಿಸುವುದು ಹಾಗೂ ಬೆಳೆಯುವುದು ಈ ಯೋಜನೆಯ ಉದ್ದೇಶವಾಗಿದ್ದು, ರೈತರನ್ನು ಗುರ್ತಿಸಿ ಮೂಲ ಸಮೀಕ್ಷೆಯನ್ನು ಕೈಗೊಂಡು ದೇಸಿ ತಳಿಯ ಬೆಳೆಯ ಬಗ್ಗೆ ಪರಿಮಾಣಾತ್ಮಕ ಹಾಗೂ ಗುಣಾತ್ಮಕ ಮಾಹಿತಿ ಸಂಗ್ರಹಿಸುವುದಾಗಿದೆ. ಈ ಕಾರ್ಯ ಹನೂರು ಹೋಬಳಿ ವ್ಯಾಪ್ತಿಯಲ್ಲಿ ಕಾರ್ಯರೂಪದಲ್ಲಿದ್ದು, ಬೆಳೆಯುವ ಬಗ್ಗೆ ರೈತರನ್ನು ಉತ್ತೇಜಿಸಲಾಗುತ್ತಿದೆ. ಕಾಂಪೋಸ್ಟ್, ಎರೆಹುಳು, ಕೊಟ್ಟಿಗೆ, ಜೈವಿಕ, ಹಸಿರೆಲೆ ಗೊಬ್ಬರ ಹಾಗೂ ಇತರ ಸಾವಯವ ಗಿಡಮೂಲಿಕೆಗಳ ಗೊಬ್ಬರವನ್ನು ಬಳಸಿ ದೇಸಿ ತಳಿ ಫಸಲನ್ನು ಬೆಳೆಯುವ ರೈತರಿಗೆ ಉತ್ಪಾದನಾ ಪ್ರೋತ್ಸಾಹ ಧನವನ್ನು ನೀಡುವುದರ ಮೂಲಕ ಕೃಷಿ ಇಲಾಖೆ ಬೆಂಬಲವನ್ನು ನೀಡುತ್ತಿದ್ದು, ರೈತರಿಗೆ ವರದಾನವಾಗಿದೆ.
ದೇಸಿ ತಳಿಯ ಬೆಳೆಗಳನ್ನು ಸಂರಕ್ಷಿಸುವ ಸಲುವಾಗಿ ಕೃಷಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹನೂರು ಹೋಬಳಿ ವ್ಯಾಪ್ತಿಯ ರೈತರಲ್ಲಿ ಅರಿವು ಮೂಡಿಸುತ್ತಿರುವುದು ಒಂದೆಡೆಯಾದರೆ, ಇತ್ತ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಕೈಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಇಳುವರಿ ಪಡೆಯಲು ರೈತರು ಕೃಷಿಯಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಮಣ್ಣಿನ ಫಲವತ್ತತೆ ಹಾಗೂ ಧಾನ್ಯಗಳ ಗುಣಮಟ್ಟ ಕಡಿಮೆಯಾಗುತ್ತಿದೆ. ಈ ದೆಸೆಯಲ್ಲಿ ಸಾವಯವ ಗೊಬ್ಬರವನ್ನು ಬಳಕೆ ಮಾಡುವುದರ ಮೂಲಕ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಹೋಬಳಿ ವ್ಯಾಪ್ತಿಯ ಬಂಡಳ್ಳಿ ಹಾಗೂ ಮಣಗಳ್ಳಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 125 ಎಕರೆಯ ಗುರಿಯನ್ನು ಹೊಂದಲಾಗಿದ್ದು, ರೈತರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ರೈತರಿಗೆ ಇಲಾಖೆಯ ವತಿಯಿಂದ ದೃಢೀಕರಣ ಪತ್ರವನ್ನು ನೀಡಲಾಗುತ್ತದೆ.
ದೇಸಿ ತಳಿಯ ಬೆಳೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೃಷಿ ಅಧಿಕಾರಿ ಹಾಗೂ ಸಿಬ್ಬಂದಿ ತಂಡ ಬೆಳೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಬಂಡಳ್ಳಿ ಹಾಗೂ ಮಣಗಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನೈಸರ್ಗಿಕ ಕೃಷಿ ಅಭಿಯಾನ ಕೈಗೊಳ್ಳಲಾಗಿದೆ. ಆದ್ದರಿಂದ ದೇಸಿ ತಳಿ ಬೆಳೆಯುವ ರೈತರು ಹಾಗೂ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಆಸಕ್ತ ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟನಲ್ಲಿ ದೇಸಿ ತಳಿ ಬೆಳೆಗಳ ಸಂರಕ್ಷಣೆ ಹಾಗೂ ನೈಸರ್ಗಿಕ ಕೃಷಿಗೆ ಒತ್ತು ನೀಡುವ ಉದ್ದೇಶದಿಂದ ಹನೂರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಹೆಚ್ಚಿನ ಮುತುವರ್ಜಿ ವಹಿಸಿರುವುದು ರೈತರಿಗೆ ವರದಾನವಾಗಿದೆ.