ಆಹಾರ ಪದ್ಧತಿ ಕುರಿತು ಕ್ರೀಡಾಪಟುಗಳಿಗೆ ಜಾಗೃತಿ: ಪಿಇಟಿ ಸಂಸ್ಥೆಯಲ್ಲಿ ವಿಶೇಷ ಕಾರ್ಯಕ್ರಮ

Awareness for athletes about diet Mandya
Published on

ಮಂಡ್ಯ: ನಗರದ ಪ್ರತಿಷ್ಠಿತ ಜನತಾ ಶಿಕ್ಷಣ ಸಂಸ್ಥೆ(ಪಿಇಟಿ)ಯಲ್ಲಿ ವಿವಿಧ ಕ್ರೀಡೆಯಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗೆ ಆಹಾರ ಪದ್ಧತಿ ಮತ್ತು ಪೋಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪಿಇಟಿ ಕ್ರೀಡಾ ಸಂಕೀರ್ಣದಲ್ಲಿ ಕ್ರಿಕೆಟ್, ಫುಟ್‌ಬಾಲ್, ಬ್ಯಾಡ್ಮಿಂಟನ್, ಟೆನ್ನಿಸ್, ಈಜು, ಟೇಬಲ್ ಟೆನ್ನಿಸ್ ಸೇರಿದಂತೆ ಹಲವು ಕ್ರೀಡೆಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗಲೆಂದು ಆಹಾರ ಪದ್ಧತಿ ಬಗ್ಗೆ ಮಾಹಿತಿ ಒದಗಿಸಲು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಹಾಗೂ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಮಾರ್ಗದರ್ಶನದಲ್ಲಿ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರಮಟ್ಟದ ಕ್ರೀಡಾಪಟು ಹಾಗೂ ಗಗನಯಾತ್ರಿಗಳಿಗೆ ತರಬೇತಿ ನೀಡುವ ಕ್ರೀಡಾ ಔಷಧ ತಜ್ಞ, ಇಸ್ರೋದ ವೈಜ್ಞಾನಿಕ ವಿಜ್ಞಾನಿ ಡಾ.ಆರ್.ಚೇತನ್ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ನಿತ್ಯಸಚಿವ ಕೆ.ವಿ.ಶಂಕರಗೌಡ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಹೈಡ್ರೇಷನ್, ಪೋಷಣೆ, ಮನೋವೈಜ್ಞಾನಿಕ, ದೈಹಿಕ ಮತ್ತು ಪರಿಸರ ಸಂಬಂಧಿತ ಅಂಶಗಳು ಕ್ರೀಡಾ ಕಾರ್ಯಕ್ಷಮತೆಯಲ್ಲಿ ಬೀರುವ ಪ್ರಭಾವ ಮತ್ತು ಉನ್ನತ ಮಟ್ಟದ ಪ್ರದರ್ಶನದಲ್ಲಿ ಅದರ ಮಹತ್ವ ಎಷ್ಟು ಎಂಬುದರ ಬಗ್ಗೆ ವಿವರಿಸಿದರು.

400ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಪಾಲಕರು, ತರಬೇತುದಾರರು ಪಾಲ್ಗೊಂಡರು. ಉಪನ್ಯಾಸದ ಬಳಿಕ ವಿಶೇಷವಾಗಿ ಪಾಲಕರು ಮತ್ತು ಕೋಚ್‌ಗಳೊಂದಿಗೆ ವಿಶೇಷ ಸಂವಾದ ನಡೆಯಿತು. ಸಾಮಾನ್ಯ ತರಬೇತಿ ಸಮಯದಲ್ಲಿ ಎದುರಿಸುತ್ತಿರುವ ವಿವಿಧ ಸಂದೇಹ ಮತ್ತು ಪ್ರಾಯೋಗಿಕ ಸವಾಲು ಕುರಿತು ಚರ್ಚಿಸಲಾಯಿತು. ಇದಕ್ಕೆ ಸಂಪನ್ಮೂಲ ವ್ಯಕ್ತಿ ಡಾ.ಚೇತನ್, ಉಪಯುಕ್ತ ಮಾರ್ಗದರ್ಶನ ಮತ್ತು ವೈಜ್ಞಾನಿಕ ಪರಿಹಾರ ನೀಡಿದರು.

ಉಪನ್ಯಾಸದಲ್ಲಿ ಪಾಲ್ಗೊಂಡಿದ್ದವರಿಗೆ ತಾಜಾ ಕಬ್ಬಿನ ಹಾಲು ಮತ್ತು ಮೊಳಕೆಕಾಳು ಸೇರಿದಂತೆ ಆರೋಗ್ಯಕರ ಉಪಹಾರ ನೀಡಲಾಯಿತು. ವಿಶೇಷ ಉಪನ್ಯಾಸ ಕಾರ್ಯಕ್ರಮ ಸಕಾರಾತ್ಮಕ ಮತ್ತು ಪ್ರೇರಣಾದಾಯಕ ವಾತಾವರಣದಲ್ಲಿ ಮುಗಿಯಿತು. ಟ್ರಸ್ಟ್ ಪರವಾಗಿ ಡಾ.ಚೇತನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇಡೀ ಕಾರ್ಯಕ್ರಮವನ್ನು ಪಿಇಟಿ ಕ್ರೀಡಾ ಸಂಕೀರ್ಣದ ಆಡಳಿತಾಧಿಕಾರಿ ಡಾ.ಅನಂತಪದ್ಮನಾಭ ಪ್ರಭು ಮತ್ತು ಡಾ.ಚಂದ್ರಶೇಖರ್ ನಿರ್ವಹಣೆ ಮಾಡಿದರು. ಪ್ರಾಂಶುಪಾಲ ಡಾ.ಎನ್.ಎಲ್.ಮುರಳಿಕೃಷ್ಣ, ವಿದ್ಯಾ, ಅನಿಲ್‌ಕುಮಾರ್ ಇತರರಿದ್ದರು.

ಕ್ರೀಡಾಪಟುಗಳಿಗೆ ಆಹಾರ ಪದ್ಧತಿ ಬಹುಮುಖ್ಯ. ಈ ಬಗ್ಗೆ ಅವರಿಗೆ ಸಮರ್ಪಕವಾದ ಮಾರ್ಗದರ್ಶನ ನೀಡಬೇಕು. ಅದರಂತೆ ನಮ್ಮ ಸಂಸ್ಥೆಯ ಕ್ರೀಡಾ ಸಂಕೀರ್ಣದಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗಾಗಿ ಉಪನ್ಯಾಸ ಆಯೋಜಿಸಲಾಗಿತ್ತು. ಇದರಿಂದ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಕೆ.ಎಸ್.ವಿಜಯಾನಂದ ಪಿಇಟಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net