

ಮಾನ್ವಿ: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅಗ್ನಿ ಅವಘಡ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಪಕ್ಷಿಪ್ರೇಮಿ ಸಲ್ಲಾವುದ್ದೀನ್ ಹೇಳಿದರು.
ಪಟ್ಟಣದ ಅಗ್ನಿ ಶಾಮಕದಳ ಕಚೇರಿಯಲ್ಲಿ ಭಾನುವಾರ ಅಗ್ನಿ ತಡೆಗಟ್ಟುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲಾ ಕಾಲೇಜು, ಆಸ್ಪತ್ರೆ, ನರ್ಸಿಂಗ್ ಹೋಮ್, ವಾಣಿಜ್ಯ ಕಚೇರಿ, ಮಾಲ್, ಬಹುಮಹಡಿ ಕಟ್ಟಡ, ಇತರ ಸಾರ್ವಜನಿಕರು ಹೆಚ್ಚಾಗಿ ಸೇರುವ ಪ್ರದೇಶಗಳ ಸ್ಥಳಗಳಲ್ಲಿ ಕಲ್ಪಿತ ಪ್ರದರ್ಶನ, ಉಪನ್ಯಾಸ ನೀಡುವ ಮೂಲಕ ಅಗ್ನಿಶಮನ ಮತ್ತು ಮುಂಜಾಗ್ರತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅಗ್ನಿ ಶಾಮಕದಳ ಕಾರ್ಯ ಉತ್ತಮವಾಗಿದೆ ಎಂದರು.
ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಇ.ನರಸಿಂಹ ಮಾತನಾಡಿ, ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಅಗ್ನಿ ಅವಘಡ ಸಂಭವಿಸಿದಾಗ ಪ್ರಾಣದ ಹಂಗು ತೊರೆದು ಹಲವರ ಜೀವ ಕಾಪಾಡುತ್ತಾರೆ. ಅವರ ಕಾರ್ಯ ಶ್ಲಾಘನೀಯ ಎಂದರು.
ಅಗ್ನಿಶಾಮಕ ಠಾಣಾ ಅಧಿಕಾರಿ ರಂಗಪ್ಪ, ಸಹಾಯಕ ಅಧಿಕಾರಿ ಹಾಜೀಮಿಯಾ, ಸಿಬ್ಬಂದಿ ರಾಜಾಸಾಬ್, ತಿರುಪತಿ, ಗಡ್ಡೇಪ್ಪ, ರುಸ್ತುಮ್ ಪಾಷಾ, ಚನ್ನಪ್ಪ, ನಾಗರಾಜ, ಹಿರಿಯ ಛಾಯಾಚಿತ್ರಗ್ರಾಹಕ ಜಗನ್ನಾಥ ಚೌದರಿ, ಪತ್ರಕರ್ತ ಶರಣಬಸವ ನೀರಮಾನ್ವಿ ಇತರರಿದ್ದರು.