ಕ್ಷಯ ರೋಗ ಮುಕ್ತ ಜಿಲ್ಲೆಯಾಗಿಸಲು ಜಾಗೃತಿ: ಡಾ.ಟಿ.ಪಿ.ಬಾಲಕೃಷ್ಣ

Dr. Balakrishna
????????????????????????????????????
Published on

ಚಿಕ್ಕಮಗಳೂರು: ವಿಶ್ವ ಕ್ಷಯರೋಗ ದಿನದ ಪ್ರಯುಕ್ತ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಮಾ.24ರಂದು ವಿವಿಧ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಟಿ.ಪಿ.ಬಾಲಕೃಷ್ಣ ತಿಳಿಸಿದರು. ನಗರದ ತಾಪಂ ಪಕ್ಕದ ಕಟ್ಟಡದಲ್ಲಿ ನಡೆಯುವ ವಿಶ್ವ ಕ್ಷಯ ರೋಗ ದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ನ್ಯಾಯಾಧೀಶರು ಪಾಲ್ಗೊಳ್ಳುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅರಿವಿಗೆ ಕಾರ್ಯಕ್ರಮ ವೈವಿಧ್ಯ:
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಸ್ಮಾರಕ ಹಾಗೂ ಕಟ್ಟಡಗಳಲ್ಲಿ ಕೆಂಪು ದೀಪ ಉರಿಸುವ ಜತೆಗೆ ಧ್ವನಿವರ್ಧಕಗಳ ಮೂಲಕ ಪ್ರಚಾರ, ಕರಪತ್ರ ಹಂಚುವ ಮೂಲಕ ಕ್ಷಯರೋಗ ನಿರ್ಮೂಲನೆ ಕುರಿತು ಅರಿವು ಮೂಡಿಸಲಾಗುವುದು. ಪ್ರತಿ ತಾಲೂಕಿನಲ್ಲಿ ಟಿಬಿಯಿಂದ ಗುಣಮುಖರಾದ ಐವರು ಚಾಂಪಿಯನ್‍ಗಳನ್ನು ಗುರುತಿಸಿ ಅವರಿಂದ ಕ್ಷಯ ರೋಗ ಚಿಕಿತ್ಸೆ ಹಾಗೂ ಇತರ ಸೇವೆಗಳ ಕುರಿತು ಅನಿಸಿಕೆ ಚಿತ್ರೀಕರಿಸಲಾಗುವುದು. ಕ್ಷಯರೋಗ ನಿರ್ಮೂಲನೆಗೆ ಶ್ರಮಿಸಿರುವ ಇಲಾಖೆಯ ವಿವಿಧ ವೃಂದದ ನೌಕರರನ್ನು ಗುರುತಿಸಿ ಸನ್ಮಾನಿಸಲಾಗುವುದು. ಸಮುದಾಯದಲ್ಲಿ ಕ್ಷಯ ರೋಗ ಕುರಿತು ಅರಿವು ಮೂಡಿಸಲು ಜಾನಪದ ಕಲಾತಂಡಗಳ ಮೂಲಕ 11 ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

2025ರೊಳಗೆ 4 ಜಿಲ್ಲೆ ಕ್ಷಯ ಮುಕ್ತ:
ರಾಜ್ಯ ಸರ್ಕಾರ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು 2025ರ ಒಳಗಾಗಿ ಕ್ಷಯ ಮುಕ್ತ ಜಿಲ್ಲೆಗಳಾಗಿ ರೂಪಿಸುವ ಗುರಿ ಹೊಂದಿದೆ. ಇದಕ್ಕಾಗಿ ಸಕ್ರಿಯ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮ ನಡೆಸಲಾಗುವುದು. ರಾಜ್ಯದಲ್ಲಿ 2019ರಲ್ಲಿ 91,997 ಹಾಗೂ 2020ರಲ್ಲಿ 66,934 ಹೊಸ ಕ್ಷಯ ರೋಗಿಗಳು ಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದರು. ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲಿ ಕ್ಷಯರೋಗದ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿದೆ. 2018ರಲ್ಲಿ 1033, 2019ರಲ್ಲಿ 1068 ಪ್ರಕರಣಗಳು ಪತ್ತೆಯಾಗಿದ್ದರೆ, 2020ರಲ್ಲಿ 875 ಪ್ರಕರಣಗಳು ಮಾತ್ರ ವರದಿಯಾಗಿವೆ. ಪ್ರಸ್ತುತ ಜಿಲ್ಲೆಯಲ್ಲಿ 31 ಜನರು ಬಹು ಔಷಧ ನಿರೋಧಕ ಕ್ಷಯರೋಗದಿಂದ ಬಳಲುತ್ತಿದ್ದು, 69 ಮರಣಗಳು ಸಂಭವಿಸಿವೆ. 48 ಮಂದಿ ಹೆಚ್‍ಐವಿ ಸೋಂಕಿತರು ಸಹ ಈ ರೋಗದಿಂದ ಬಳಲುತ್ತಿದ್ದು, 398 ರೋಗಿಗಳು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ವಿಶ್ವದ ಶೇ.25ರಷ್ಟು ಜನರಲ್ಲಿ ಸೋಂಕು:
ವಿಶ್ವದಲ್ಲಿ ಶೇ.25ರಷ್ಟು ಜನರು ಕ್ಷಯ ರೋಗದಿಂದ ಬಳಲುತ್ತಿದ್ದು, ಅವುಗಳ ಕಾಲು ಭಾಗದಷ್ಟು ರೋಗಿಗಳು ಭಾರತದವರು. 2017ರ ಮಾಹಿತಿ ಪ್ರಕಾರ 10 ದಶಲಕ್ಷ ಜನರು ರೋಗದಿಂದ ಬಳಲುತ್ತಿದ್ದು, 10 ಲಕ್ಷ ಜನರು ಮರಣ ಹೊಂದಿದ್ದಾರೆ. ಚಿಕಿತ್ಸೆ ಪಡೆಯದ ಓರ್ವ ಕ್ಷಯ ರೋಗಿ ಪ್ರತಿ ವರ್ಷ 15ರಿಂದ 20 ಜನರಿಗೆ ರೋಗ ಹರಡುವ ಸಾಧ್ಯತೆ ಇದೆ. ಟಿ.ಬಿ.ವರದಿ 2020ರ ಪ್ರಕಾರ ಭಾರತದಲ್ಲಿ 20.04 ಲಕ್ಷ ರೋಗಿಗಳು ನಿಕ್ಷಯ್‍ನಲ್ಲಿ ನೋಂದಣಿಯಾಗಿದ್ದಾರೆ. ಭಾರತದಲ್ಲಿ ಪ್ರತಿ 5 ನಿಮಿಷಕ್ಕೆ ಕ್ಷಯರೋಗದಿಂದ ಇಬ್ಬರು ಮರಣ ಹೊಂದುತ್ತಿದ್ದಾರೆ ಎಂದರು.

ಎಚ್‍ಐವಿ ಬಗ್ಗೆ ಮನೆ ಮನೆ ಜಾಗೃತಿ:
ಕಡೂರು ತಾಲೂಕಿನಲ್ಲಿ ಸೋಮವಾರದಿಂದ ಎರಡು ದಿನ ಎಚ್‍ಐವಿ ಏಡ್ಸ್ ಕುರಿತು ಮನೆ ಮನೆ ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮುಖ್ಯಸ್ಥ ಡಾ.ಬಾಲಕೃಷ್ಣ ಹೇಳಿದರು. 243 ಆಶಾ ಕಾರ್ಯಕರ್ತೆಯರು 73,848 ಮನೆಗಳಿಗೆ ಭೇಟಿ ನೀಡಿ 12 ವರ್ಷಕ್ಕಿಂತ ಮೇಲ್ಪಟ್ಟ ಸದಸ್ಯರಿಗೆ ಎಚ್‍ಐವಿ ಏಡ್ಸ್ ಕುರಿತ ಕರಪತ್ರ ನೀಡಲಿದ್ದಾರೆ. ಇದೇ ವೇಳೆ ಮನೆ ಬಾಗಿಲಿಗೆ ಹೆಚ್‍ಐವಿ ಉಚಿತ ಸಹಾಯವಾಣಿ 1097 ಸಂಖ್ಯೆಯ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಆಂದೋಲನದ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದರು.

ಎಲ್ಲ ಹಂತದ ವರದಿಗಳನ್ನು ರಾಜ್ಯಮಟ್ಟಕ್ಕೆ ಕಳಿಸಲಾಗುವುದು. ಆಟೋ ರಿಕ್ಷಾಗಳಲ್ಲಿ ಧ್ವನಿವರ್ಧಕದ ಮೂಲಕವೂ ಪ್ರಚಾರ ಮಾಡಲಾಗುವುದು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗದಗ ನರಗುಂದದ ಶ್ರೀ ಬೀರಲಿಂಗೇಶ್ವರ ಕಲಾ ತಂಡದಿಂದ 9 ದಿನ 18 ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಆರೋಗ್ಯ ಮೇಲ್ವಿಚಾರಕರಾದ ಪ್ರಭು ಹಾಗೂ ಕಿರಣ್, ಜಲಜಾಕ್ಷಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net