‘ನಂದಿನಿ’ಉತ್ಪನ್ನಗಳ ಕುರಿತು ಮೈಮುಲ್‌ನಿಂದ ಚಾಮುಂಡಿಬೆಟ್ಟದಲ್ಲಿ ಜಾಗೃತಿ ಜಾಥಾ

4
Published on

ಮೈಸೂರು: ‘ನಂದಿನಿ’ಉತ್ಪನ್ನಗಳನ್ನು ಉಪಯೋಗಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್)ದಿಂದ ಭಾನುವಾರ ಚಾಮುಂಡಿಬೆಟ್ಟದಲ್ಲಿ ಜಾಥಾ ನಡೆಯಿತು.
‘ಶುದ್ಧ, ಆರೋಗ್ಯಕರ ನಂದಿನಿ ಪ್ರತಿ ಮನೆಯ ಗೆಳೆಯ’ ‘ನಂದಿನಿ ಹಾಲು ಕೇಳಿ ಪಡೆಯಿರಿ’ ಎಂಬಿತ್ಯಾದಿ ನಾಮಫಲಕ ಹಿಡಿದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ಚಾಮುಂಡಿ ಬೆಟ್ಟದ ಮೆಟ್ಟಿಲೇರಿ ಅರಿವು ಮೂಡಿಸುವ ಮೂಲಕ ಗಮನ ಸೆಳೆದರು.
ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆಯ ಅರಿವು ಮೂಡಿಸುವ ವಿಶೇಷ ಪ್ರಯತ್ನವಾಗಿ ವಿಭಿನ್ನ ಕಾರ್ಯಕ್ರಮ ರೂಪಿಸಿತು. ಮೈಮುಲ್ ಅಧ್ಯಕ್ಷ ಎಂ.ಪ್ರಸನ್ನ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಮುಂಡಿ ಬೆಟ್ಟದ ಪಾದದಿಂದ ಹೊರಟು ದೇವಾಲಯದವರೆಗೂ ಕಾಲ್ನಡಿಗೆಯಲ್ಲಿ ಸಾಗಿದರು.
ಒಕ್ಕೂಟದ ಅಧ್ಯಕ್ಷ ಎಂ.ಪ್ರಸನ್ನ ಮಾತನಾಡಿ, ಜಿಲ್ಲಾ ಹಾಲು ಒಕ್ಕೂಟವೂ ವರ್ಷಪೂರ್ತಿ ಹಲವು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಅದರಂತೆ ಜೂ.1ರಂದು ವಿಶ್ವ ಹಾಲು ದಿನದ ಅಂಗವಾಗಿ ಬೈಕ್ ಜಾಥಾ ಮೂಲಕ ಅರಿವು ಮೂಡಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ವಾರಾಂತ್ಯದಲ್ಲಿ ಚಾಮುಂಡಿ ಬೆಟ್ಟದ ಮೆಟ್ಟಿಲೇರುವ ವಾಯು ವಿಹಾರಿಗಳಿಗೆ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಮಹಿಳೆಯರಿಗೂ ಹಾಲಿನ ಬಳಕೆಯ ಮೂಲಕ ಅಡುಗೆ ಮಾಡುವ ಮೂಲಕ ಅಪೌಷ್ಟಿಕತೆ ಹೋಗಲಾಡಿಸಲೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ರೈತರ ಹಿತದೃಷ್ಟಿಯಿಂದ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಈಗಾಗಲೇ ಮೈಮುಲ್ ನಿಂದ ಹೆಚ್ಚಿನ ಉತ್ಪಾದನೆಗೆ ಅಗತ್ಯವಾಗಿ ಬೇಕಾದ ಎಲ್ಲ ನೆರವನ್ನು ರೈತರಿಗೆ ನೀಡಲಾಗುತ್ತಿದೆ. ಹುಲ್ಲಿನ ಕಟ್ಟಿಂಗ್‌ಯಂತ್ರ, ನೆಲ ಹಾಸಿಗೆ ಮ್ಯಾಟ್ ಸೇರಿ ಹಲವು ಸೌಲಭ್ಯ ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ 9 ಲಕ್ಷ ಲೀಟರ್ ಉತ್ಪಾದನೆ ದಾಟಿ ದಾಖಲೆಯ ಪ್ರಮಾಣದ ಉತ್ಪಾದನೆ ಹೆಚ್ಚಾಗಿ ಹೊರ ರಾಜ್ಯಗಳಲ್ಲಿ ಮಾರಾಟಕ್ಕೂ ಅಗತ್ಯ ತಯಾರಿ ನಡೆಸಲಾಗಿದೆ ಎಂದು ತಿಳಿಸಿದರು.
ಮೈಮುಲ್ ನಿರ್ದೇಶಕ ಸಚ್ಚಿದಾನಂದ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡಿ ಜನತೆಯನ್ನು ಆರೋಗ್ಯಯುತವಾಗಿ ಕಾಪಾಡುವುದು ಪ್ರತಿಯೊಬ್ಬ ಪ್ರಜ್ಞಾವಂತರ ಕರ್ತವ್ಯವಾಗಿದೆ. ಇದರ ಭಾಗವಾಗಿ ಉತ್ಕೃಷ್ಟ ಉತ್ಪನ್ನಗಳಾದ ಹಾಲಿನ ಉತ್ಪನ್ನಗಳ ಬಳಕೆ ಅರಿವು ಮೂಡಿಸಲು ವರ್ಷವಿಡೀ ಒಂದಿಲ್ಲೊಂದು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ವಿಜಯಕುಮಾರ್ ಮಾತನಾಡಿ, ಒಕ್ಕೂಟದಲ್ಲಿ ಹಾಲಿನ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಅದರೊಟ್ಟಿಗೆ ಅದರ ಮಾರಾಟವೂ ದೊಡ್ಡ ಸವಾಲಾಗಿದೆ. ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಮೈಸೂರು ನಗರದಲ್ಲಿ ಒಂದಿಲ್ಲೊಂದು ಕಾರ್ಯಕ್ರಮ ರೂಪಿಸಿಕೊಂಡು ಬರಲಾಗುತ್ತಿದೆ. ಬೈಕ್ ಜಾಥಾ, ನಂದಿನಿ ಪಾಕ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈಗ ಬೆಟ್ಟದ ಮೆಟ್ಟಿಲು ಹತ್ತಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದು, ಮುಂದಿನ ದಿನಗಳಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸುವ ಚಿಂತನೆಯಿದೆ. ಅಲ್ಲದೇ ಮನೆ ಮನೆಗೂ ಅರಿವು ಮೂಡಿಸುವ ಕಾರ್ಯಕ್ರಮ ಸೇರಿದಂತೆ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮೈಮುಲ್ ನಿರ್ದೇಶಕರಾದ ಕೆ.ಊಮಾಶಂಕರ್, ಎ.ಟಿ.ಸೋಮಶೇಖರ್, ಸಿ.ಓಂ ಪ್ರಕಾಶ್, ರಾಜ್ಕುಮಾರ್, ಮಾರುಕಟ್ಟೆ ವ್ಯವಸ್ಥಾಪಕ ಎಚ್.ಕೆ.ಜಯಶಂಕರ್, ವ್ಯವಸ್ಥಾಪಕ (ಆಡಳಿತ- ಖರೀದಿ ವಿಭಾಗ) ಜಗದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net