

ಹುಬ್ಬಳ್ಳಿ: ವಿಶ್ವ ತಂಬಾಕು ರಹಿತ ದಿನ ನಿಮಿತ್ತ ಎಚ್‌ಸಿಜಿ ಸುಚಿರಾಯು ಆಸ್ಪತ್ರೆ ಮತ್ತು ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್, ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ಇಲ್ಲಿಯ ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ ಶನಿವಾರ ವಿಶೇಷ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯ ಇಂಟರ್‌ವೆನ್ಷನಲ್ ಪಲ್ಮನಾಲಜಿಸ್ಟ್ ಸಲಹೆಗಾರ ಡಾ. ಗೋವಿಂದ ದೇಸಾಯಿ ಮಾತನಾಡಿ, ಯುವಕರು ಸಾಮಾಜಿಕ ಒತ್ತಡ ಅಥವಾ ಕಾರ್ಯದೊತ್ತಡ ನಿಭಾಯಿಸಲು ಧೂಮಪಾನ ಆರಂಭಿಸುವುದು ಆತಂಕಕಾರಿ. ಏಕೆಂದರೆ ಅವರು ದೀರ್ಘಕಾಲಿಕವಾಗಿ ಅನುಭವಿಸಬೇಕಿರುವ ಸಮಸ್ಯೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಸಾಮಾನ್ಯ ಚಟವಾಗಿ ಪ್ರಾರಂಭವಾದದ್ದು ಶೀಘ್ರದಲ್ಲೇ ಜೀವನಪರ್ಯಂತ ಚಟವಾಗಿ ಮಾರ್ಪಾಟಾಗುತ್ತದೆ. ತಂಬಾಕು ಚಟಗಳು ಶ್ವಾಸಕೋಶ, ಗಂಟಲು, ಮೂತ್ರಕೋಶದ ಕ್ಯಾನ್ಸರ್‌ಗಳಿಗೆ ನೇರವಾಗಿ ಕಾರಣವಾಗುವುದು ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿವೆ. ಪೋಷಕರು ಮತ್ತು ಶಿಕ್ಷಕರ ಆರಂಭಿಕ ಜಾಗೃತಿಯು ದೊಡ್ಡ ಬದಲಾವಣೆ ತರುತ್ತದೆ. ಮಕ್ಕಳು ತಮ್ಮ ಮೊದಲ ಸಿಗರೇಟ್‌ಗೆ ಬೆಂಕಿ ಹಚ್ಚುವ ಮೊದಲೇ ಈ ಅಪಾಯದ ಬಗ್ಗೆ ಚರ್ಚಿಸಬೇಕಿದೆ ಎಂದರು.
ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್ ಕನ್ಸಲ್ಟೆಂಟ್ ಹಾಗೂ ರೇಡಿಯೇಷನ್ ಆಂಕಾಲಾಜಿಸ್ಟ್ ಡಾ. ಆದರ್ಶ ಹೆಗ್ಡೆ ಮಾತನಾಡಿ, ತಂಬಾಕಿನಿಂದ ಉಂಟಾಗುವ ಕ್ಯಾನ್ಸರ್ ಸಂಪೂರ್ಣವಾಗಿ ತಡೆಯಬಹುದು. ಶಿಕ್ಷಣ ಸಂಸ್ಥೆಗಳ ಮೂಲಕ ಯುವಕರಲ್ಲಿ ಅರಿವು ಮೂಡಿಸುವುದರಿಂದ ಅಪಾಯಕಾರಿ ಚಟಗಳು ಬೇರೂರುವ ಮೊದಲೇ ಅವರ ಮನಸ್ಸನ್ನು ಪರಿವರ್ತಿಸಬಹುದು ಎಂದರು.
ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಸ್.ಸಿ. ಸಜ್ಜನ, ಸಹಾಯಕ ಪ್ರಾಧ್ಯಾಪಕ ಶಿವಪ್ರಕಾಶ ಎಂ.ವಿ., ಕಚೇರಿ ಅಧೀಕ್ಷಕಿ ರೇಖಾ ಹಾರ್ವಿ ಭಾಗವಹಿಸಿದ್ದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಜರುಗಿತು.
ಇದಕ್ಕೂ ಮೊದಲು ತಂಬಾಕು ನಿಮ್ಮನ್ನು ಜೀವಚ್ಛವವಾಗಿಸುತ್ತದೆ ಎಂಬ ಶೀರ್ಷಿಕೆಯಡಿ ವಿಶಿಷ್ಟ ಜಾಗೃತಿ ಅಭಿಯಾನ ನಡೆಸಲಾಯಿತು. ಅಭಿಯಾನದಲ್ಲಿ ಫೋಟೋ ಬೂತ್‌ಗಳು ಮತ್ತು ಜಾಂಬಿಗಳ (ಪ್ರೇತಾತ್ಮಗಳ ಕಲಾಕೃತಿ) ಥೀಮ್‌ನ ಹಿನ್ನೆಲೆಯನ್ನು ಬಳಸಿ ತಂಬಾಕಿನ ದುಷ್ಪಪರಿಣಾಮಗಳನ್ನು ದೃಶ್ಯಾತ್ಮಕವಾಗಿ ಪ್ರಸ್ತುತಪಡಿಸಲಾಯಿತು.
ಜಾಗೃತಿ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿದ್ದರು.