ರಾಜ್ಯಸರ್ಕಾರ ವಿರುದ್ಧ ಜಾಗೃತಿ ಅಭಿಯಾನ: ಬೆಲೆ ಏರಿಕೆ ಖಂಡಿಸಿ ಬಿಜೆಪಿ ವಿನೂತನ ಪ್ರತಿಭಟನೆ

Awareness campaign against the state government Mandya
Published on

ಮಂಡ್ಯ: ರಾಜ್ಯಸರ್ಕಾರ ಹಾಲು, ಡೀಸೆಲ್ ಹಾಗೂ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತ ಸೇರಿದಂತೆ ಹಲವೆಡೆ ವಾಹನ ಚಾಲಕರು, ಸಾರ್ವಜನಿಕರಿಗೆ ದಾಸವಾಳ, ಗುಲಾಬಿ ಹೂವು, ಸಿಹಿ ತಿಂಡಿ ಕೊಟ್ಟು ನಮ್ಮನ್ನು ಕ್ಷಮಿಸಿ ಬಿಡಿ ಎಂದು ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹುಟ್ಟಿನಿಂದ ಸಾವಿನವರೆಗೂ ಬೆಲೆಯೇರಿಕೆ ಮಾಡಿರುವ ಅಪಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ದೇಶದಲ್ಲೇ ಅತ್ಯಂತ ದುಬಾರಿಯಾದ ಜೀವನವನ್ನು ಕರ್ನಾಟಕದ ಜನತೆ ನಡೆಸುವಂತಹ ದುಸ್ಥಿತಿಯನ್ನು ಕಾಂಗ್ರೆಸ್ ನಿರ್ಮಾಣ ಮಾಡಿದೆ. ಗಾಳಿಯನ್ನು ಹೊರತುಪಡಿಸಿ ಮಿಕ್ಕೆಲ್ಲಾ ವಸ್ತುಗಳ ಬೆಲೆಯನ್ನು ಹೆಚ್ಚಿಸಿದೆ. ಜನರ ಕಷ್ಟವನ್ನು ಕಿಂಚಿತ್ತೂ ಅರ್ಥ ಮಾಡಿಕೊಳ್ಳಲು ಅಸಮರ್ಥವಾದ ಆಡಳಿತವನ್ನು ಸಿದ್ದರಾಮಯ್ಯ ನೀಡುತ್ತಿದ್ದಾರೆ. ಮತಕೊಟ್ಟು ಅಧಿಕಾರಕ್ಕೆ ತಂದ ಮತದಾರರಿಗೆ ವರವಾಗುವ ಬದಲು ಈ ಸರ್ಕಾರ ಶಾಪಗ್ರಸ್ಥವಾಗಿದೆ. ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು 3 ರೂ ಹೆಚ್ಚು ಮಾಡುವುದರೊಂದಿಗೆ ಬೆಲೆಯೇರಿಕೆಯ ಶುಭಾರಂಭ ಆರಂಭಿಸಿದ ರಾಜ್ಯ ಸರ್ಕಾರ ಈಗ ಒಂದಾದ ಮೇಲೊಂದು ಪದಾರ್ಥದ ಬೆಲೆಯನ್ನು ಸಂವೇದನಾಶೀಲತೆಯಿಲ್ಲದೆ ಹೆಚ್ಚಳ ಮಾಡುತ್ತಿದ್ದಾರೆ ಎಂದು ದೂರಿದರು.

ಹಾಲಿನ ದರವನ್ನು ಕಳೆದ ಎರಡು ವರ್ಷದಲ್ಲಿ ಮೂರು ಬಾರಿ ಅಂದರೆ ಒಟ್ಟು 9 ರೂ ಹೆಚ್ಚಳ ಮಾಡಿ ಬಡವರ ಮತ್ತು ಮಧ್ಯಮ ವರ್ಗದವರ ಮಗ್ಗಲು ಮುರಿಯುವ ಕೆಲಸ ಮಾಡಿದ್ದಾರೆ. ದೌರ್ಭಾಗ್ಯವೆಂದರೆ ತಮ್ಮ ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳಲು ರೈತ ಸಮುದಾಯವನ್ನು ಗುರಾಣಿಯ ಹಾಗೆ ಬಳಸಿಕೊಳ್ಳುತ್ತಿರುವುದು ಶೋಚನೀಯ. ರಾಜ್ಯಸರ್ಕಾರ ಆದಾಯ ಹೆಚ್ಚಳ ಮಾಡಲು ಎಷ್ಟು ಬರಗೆಟ್ಟಿದೆಯೆಂದರೆ ಬಡ ರೋಗಿಗಳು ಚಿಕಿತ್ಸೆಗೆ ಬರುವ ಸರ್ಕಾರಿ ಆಸ್ಪತ್ರೆಯನ್ನು ಸುಲಿಗೆ ಕೇಂದ್ರವನ್ನಾಗಿ ಮಾಡಿಕೊಂಡಿದೆ. ಉಚಿತ ಚಿಕಿತ್ಸೆ ನೀಡಬೇಕಾದ ಸರ್ಕಾರ ಬಡವರ ಹಣವನ್ನು ಆದಾಯ ಮೂಲವಾಗಿಸಿರುವುದು ಅತ್ಯಂತ ನೋವಿನ ಸಂಗತಿ. ವಿದ್ಯುತ್ ದರವನ್ನು ಹೆಚ್ಚಳ ಮಾಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ ಮಾರಣಾಂತಿಕ ಪೆಟ್ಟನ್ನು ನೀಡಿದ್ದಾರೆ. ವಿದ್ಯುತ್ ಇಲಾಖೆಯ ನೌಕರರಿಗೆ ಪಿಂಚಣಿ ಕೊಡಲು ಹಣವಿಲ್ಲದೆ ದಿವಾಳಿಯಾಗಿರುವ ಸರ್ಕಾರ, ಗ್ರಾಹಕರಿಂದ ಸುಲಿಗೆ ಮಾಡಿ ಕೊಡಲು ಮುಂದಾಗಿರುವುದು ನಾಚಿಗೇಡಿನ ಸಂಗತಿ. ಬೆಂಗಳೂರು ಮೆಟ್ರೊ ಮತ್ತು ಬಸ್ ದರ ಏರಿಕೆಯು ಕೆಳಗೆ ಬಿದ್ದವರ ಮೇಲೆ ಕಲ್ಲು ಹೇರಿದಂತಾಗಿದೆ. ರಾಜ್ಯದ ಇತಿಹಾಸದಲ್ಲೆ ಅತ್ಯಂತ ಜನವಿರೋಧಿ ಆಡಳಿತವನ್ನು ಕಾಂಗ್ರೆಸ್ ನಡೆಸುತ್ತಿದೆ. ಇಂತಹ ಸುಲಿಗೆ ಸರ್ಕಾರದ ಜನವಿರೋಧಿ ನೀತಿಯ ವಿರುದ್ದ ಬಿಜೆಪಿ ರಣಕಹಳೆ ಮೊಳಗಿಸುತ್ತಿದ್ದೆ. ಹೋರಾಟವು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net