

ಗುಂಡ್ಲುಪೇಟೆ: ಕೇಂದ್ರ ಸರ್ಕಾರದ ಧರ್ತಿ ಅಬಾ ಜನ ಜಾತೀಯ ಉತ್ಕರ್ಷ್ ಅಭಿಯಾನ ಅಂಗವಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ತಾಲೂಕಿನ ಮದ್ದೂರು ಕಾಲನಿಯ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಬುಡಕಟ್ಟು ಸಮುದಾಯದ ಜನರಿಗೆ ದಾಖಲೆ ಒದಗಿಸುವ ಜಾಗೃತಿ ಶಿಬಿರಕ್ಕೆ ಸೋಮವಾರ ಚಾಲನೆ ದೊರೆಯಿತು.
ಜೂ.16 ರಿಂದ 27ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಮೊದಲ ದಿನ ಮದ್ದೂರು ಕಾಲನಿ, ನಂತರ ತೊಂಡವಾಡಿ ಹಾಗೂ ಸೋಮನಪುರ ಗ್ರಾಮಗಳು ಆಯ್ಕೆಯಾಗಿವೆ. ಈ ಯೋಜನೆಯಡಿ ಗ್ರಾಮಪಂಚಾಯಿತಿ, ಬ್ಯಾಂಕ್‌ಗಳು, ಕೃಷಿ, ಆರೋಗ್ಯ ಮತ್ತು ಸಮಾಜಕಲ್ಯಾಣ, ಕಂದಾಯ ಇಲಾಖೆಗಳ ನೆರವಿನಿಂದ ಇಲ್ಲಿನ ಪರಿಶಿಷ್ಟ ಪಂಗಡದ ಜನರಿಗೆ ಆಧಾರ್ ಕಾರ್ಡ್, ಜನ್ ಧನ್ ಬ್ಯಾಂಕ್ ಖಾತೆ, ಆರೋಗ್ಯ ಕಾರ್ಡ್, ಹಿಮ್ ಕಿಸಾನ್ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣಪತ್ರ, ಜಾಬ್ ಕಾರ್ಡ್, ಮಾತೃವಂದನಾ ಕಾರ್ಡ್, ದಿವ್ಯಾಂಗ ಪ್ರಮಾಣಪತ್ರ, ವಿಧವಾ ವೇತನ, ವೃದ್ದಾಪ್ಯ ವೇತನ ಮುಂತಾದ ಮೂಲ ದಾಖಲೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಎಚ್.ಎಸ್.ಬಿಂದ್ಯಾ ಮಾಹಿತಿ ನೀಡಿದರು.
ಆಧಾರ್ 1 ಹೊಸದು, 14 ತಿದ್ದುಪಡಿ, 16 ಬ್ಯಾಂಕ್, ಅಬಾ ಕಾರ್ಡ್ 26, ಆಯುಷ್ಮಾನ್ 1, 17 ಜಾಬ್ ಕಾರ್ಡ್, 44 ಜಾತಿ ಹಾಗೂ ಆದಾಯ ಪ್ರಮಾಣಪತ್ರ ನೀಡಲಾಯಿತು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ತಿಳಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಶಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಜಾನಪದ ಸಾರ್ವಭೌಮ ಪ್ರಶಸ್ತಿ ವಿಜೇತ ಗಿರಿಜನ ಮಹಿಳೆ ರತ್ನಮ್ಮ, ಗ್ರಾಮಾಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.