ಗ್ಯಾರಂಟಿ ಯೋಜನೆ ವಂಚಿತರಿಗೆ ಅರಿವು ಶಿಬಿರ

19 KRN-2
ಕೆ.ಆರ್.ನಗರ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅರಿವು ಶಿಬಿರ ಕಾರ್ಯಕ್ರಮದ ಅಂಗವಾಗಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಂ.ಎಸ್.ಮಹದೇವ್ ಮನೆಗಳಿಗೆೆ ಭೇಟಿ ನೀಡಿ ಜನರ ಅಹವಾಲು ವಿಚಾರಿಸಿದರು. ಲತಾ,ಉದಯಶಂಕರ್, ಸೈಯದ್ ಜಾಬೀರ್, ಕುಲದೀಪ್, ಅರ್ಕೇಶ್ ಮೂರ್ತಿ ಇನ್ನಿತರರು ಇದ್ದರು.
Published on

ಕೆ.ಆರ್.ನಗರ : ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಪರ್ಕವಾಗಿ ಅರ್ಹರಿಗೆ ಸಿಗಲಿ ಎಂಬ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಅರಿವು ಶಿಬಿರ ಮಾಡಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಂ.ಎಸ್.ಮಹದೇವ್ ಹೇಳಿದರು.

ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಗುರುವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅರಿವು ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷ ಚುನಾವಣಾ ಪೂರ್ವದಲ್ಲಿ ರಾಜ್ಯದ ಜನರಿಗೆ ನೀಡಿದ ಭರವಸೆಗಳನ್ನು ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಪ್ರತಿ ಕುಟುಂಬಕ್ಕು ಅನುಕೂಲವಾಗುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಿದೆಯಲ್ಲದೇ ಅರ್ಹರು ಇವುಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅನುಷ್ಠಾನ ಸಮಿತಿಯನ್ನು ರಚಿಸಿದೆ ಎಂದು ತಿಳಿಸಿದರು.

ಈಗಾಗಲೇ ಗೃಹಲಕ್ಷ್ಮಿಯ 20 ಕಂತುಗಳು ಅರ್ಹ ಕುಟುಂಬದ ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ ಜಮಾವಣೆಗೊಂಡಿದ್ದು, ಇದರಿಂದ ಬಡವರು ಗೌರವಯುತ ಬದುಕು ನಡೆಸುವಂತಾಗಿದೆ. ಗೃಹಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ, ಅನ್ನಭಾಗ್ಯ ಸೇರಿದಂತೆ ರಾಜ್ಯದ ಪ್ರತಿ ಕುಟುಂಬವು ಇವುಗಳ ಸೌಲಭ್ಯ ಪಡೆದುಕೊಳ್ಳುವುದು ಯೋಜನೆ ಸದುದ್ದೇಶವಾಗಿದೆ. ಇಂತಹ ಸಂದರ್ಭದಲ್ಲಿ ಕೆಲವರು ಅರ್ಹರಿದ್ದರು ಕೆಲವು ತಾಂತ್ರಿಕ ಕಾರಣಗಳಿಂದ ಯೋಜನೆಯ ಅನುಕೂಲ ಪಡೆಯಲು ಸಾಧ್ಯವಾಗದೆ ಇದ್ದು ಅಂತವರನ್ನು ನಮ್ಮ ಅನುಷ್ಠಾನ ಸಮಿತಿಯವರು ಗುರುತಿಸಿ ಅವರಿಗು ಸವಲತ್ತು ಸಿಗುವ ನಿಟ್ಟಿನಲ್ಲಿ ಈ ಅರಿವು ಶಿಬಿರ ನಡೆಸಲಾಗುತ್ತಿದೆ ಎಂದು ಹೇಳಿದರು.

ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನ ಸಾಮಾನ್ಯರು ಪಂಚಗ್ಯಾರಂಟಿ ಯೋಜನೆಗಳ ಬಗ್ಗೆಯಲ್ಲದೇ ಇತರ ಸಮಸ್ಯೆಗಳನ್ನು ತಿಳಿಸುತ್ತಿದ್ದು ಅಂತಹ ಸಮಸ್ಯೆಗಳಿಗು ಅಧಿಕಾರಿಗಳಿಂದ ಪರಿಹಾರ ಮಾಡಿಸಲು ಈ ಶಿಬಿರಗಳು ಅನುಕೂಲವಾಗುತ್ತಿವೆ ಎಂದರು.

ತಾಲೂಕು ಪಂಚಾಯಿತಿ ಇಒ ಕುಲದೀಪ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಮಾತ್ರ ಇಷ್ಟು ದಿನಗಳ ಕಾಲ ನಡೆಯುತಿತ್ತು. ಆದರೆ ರಾಜ್ಯ ಸಮಿತಿಯ ಸೂಚನೆಯಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ ಮನೆಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಲಾಗುತ್ತಿದ್ದು ನಮ್ಮ ತಾಲೂಕಿನಲ್ಲಿ ಇದು ಮೊದಲ ಸಭೆಯಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುವ ಜತೆಗೆ ಈ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನವಾಗಿರುವುದು ಕಂಡು ಬಂದಿದೆ. ಇದಕ್ಕೆ ಅನುಷಾನ ಸಮಿತಿ, ಅಧಿಕಾರಿಗಳು ಹಾಗೂ ಸ್ಥಳೀಯರ ಶ್ರಮವೇ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಶಿಬಿರವನ್ನು ಕುರಿತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷೆ ಲತಾ, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಉದಯಶಂಕರ್, ಸೆಸ್ಕ್ ಎಇಇ ಅರ್ಕೇಶ್ ಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಮೇಲ್ವಿಚಾರಕಿ ಗಾಯತ್ರಿ, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಎ.ಡಿ.ಕುಮಾರ್, ಆಹಾರ ಇಲಾಖೆ ಶೀರಸ್ತೇದಾರ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಈರಮ್ಮ, ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ಪ್ರಾಣೇಶ್, ರಾಮಚಂದ್ರೇಗೌಡ, ರೇಖಾ, ಪಿಡಿಒ ಕೆ.ವಿ.ಮಹೇಶ್, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಕುಮಾರ, ಯತೀರಾಜ್, ಚೇತನ್, ಮೋಹನ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net