

ಕೆ.ಎಂ.ದೊಡ್ಡಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಫೆ.14 ರಂದು ಬೃಹತ್ ರಕ್ತದಾನ ಶಿಬಿರ ಜರುಗಲಿರುವ ಹಿನ್ನೆಲೆಯಲ್ಲಿ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ವತಿಯಿಂದ ಕಲಾವಿದರು ವಿವಿಧ ಪೌರಾಣಿಕ ಹಿನ್ನೆಲೆಯ ವೇಷ ಧರಿಸಿ ರಕ್ತದಾನ ಮಾಡುವಂತೆ ವಿಭಿನ್ನವಾಗಿ ಜಾಗೃತಿ ಮೂಡಿಸಿದರು.
ಸಮಾನ ಮನಸ್ಕರ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆ ಹಾಗೂ ಯುವಕ ಮಿತ್ರರ ಒಕ್ಕೂಟದ ವತಿಯಿಂದ ಭಾರತೀನಗರದ ಮದ್ದೂರು ಮಳವಳ್ಳಿ ಮುಖ್ಯರಸ್ತೆಯ ತಿಬ್ಬಾದೇವಿ ಕಾಂಪ್ಲೆಕ್ಸ್‌ನಲ್ಲಿ ಏರ್ಪಡಿಸಲಾಗಿದ್ದು, ದಾಖಲೆಯ ರಕ್ತ ಸಂಗ್ರಹ ಮಾಡಲು ಗುರಿ ಹೊಂದಿದ್ದು ಇದಕ್ಕಾಗಿ ಹಲವು ಪ್ರಚಾರ ವೈಖರಿಗಳನ್ನು ಮಾಡುತ್ತ ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಅಂತೆಯೇ ಕಲಾವಿದರು ಸಹ ನಮ್ಮ ಸೇವೆ ರಕ್ತದಾನಿಗಳಿಗೆ ಮೀಸಲು ಎಂಬ ಸಂದೇಶದೊಂದಿಗೆ ಭಾರತೀನಗರದ ಮದ್ದೂರು-ಮಳವಳ್ಳಿ ಮುಖ್ಯರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಶ್ರೀರಾಮ, ಸೀತಾ, ಆಂಜನೇಯ, ಈಶ್ವರ, ಭೀಮಾ, ರಾವಣ, ಅರ್ಜುನ, ಚಂದ್ರಮಾ, ವಿಧುರ ಸೇರಿದಂತೆ ರಾಮಯಾಣ ಮತ್ತು ಮಹಾಭಾರತ ಕಥಾ ಪಾತ್ರಧಾರಿಗಳು ಬಣ್ಣ ಹಚ್ಚಿ ರಕ್ತದಾನಕ್ಕೆ ಬೆಂಬಲ ಸೂಚಿಸಿದರು.
ಶಿಬಿರ ಹಿನ್ನೆಲೆ: ಪುಲ್ವಾಮಾ ದಾಳಿಯಲ್ಲಿ 2019ರ ಫೆ.14 ರಂದು ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಗುರು ಎಂಬ ಯೋಧ ಹುತಾತ್ಮರಾಗಿದ್ದರು. ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ಸ್ಮರಣಾರ್ಥವಾಗಿ 2019ರಿಂದ ವಿವಿಧ ಯುವಕ ಮಿತ್ರರ ವತಿಯಿಂದ ರಕ್ತದಾನ ಶಿಬಿರವನ್ನು ಪ್ರಾರಂಭಿಸಿದ್ದು, ಮೊದಲನೇ ವರ್ಷದಲ್ಲಿ 397 ಯೂನಿಟ್ ರಕ್ತ ಸಂಗ್ರಹವಾಗಿತ್ತು, ಸಂಗ್ರಹವಾದ ರಕ್ತವನ್ನು ಮಂಡ್ಯ ಜಿಲ್ಲಾಸ್ಪತ್ರೆ ರಕ್ತ ನಿಧಿಕೇಂದ್ರಕ್ಕೆ ನೀಡಲಾಗಿತ್ತು.
ಅಬ್ಬರದ ಪ್ರಚಾರ: ರಕ್ತದಾನ ಶಿಬಿರದ ರೂವಾರಿಗಳು ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದಾರೆ. ರಾಜಕಾರಣಿಗಳು, ಸಿನಿಮಾ ತಾರೆಯರು, ಸಮಾಜ ಸೇವಕರು, ಉನ್ನತ ಅಧಿಕಾರಿಗಳು, ಕ್ರೀಡಾಪಟುಗಳು ಸೇರಿದಂತೆ ಸಮಾಜಿಕವಾಗಿ ಗುರುತಿಸಿಕೊಂಡಿರುವ ಗಣ್ಯರನ್ನು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮತ್ತೊಬ್ಬರ ಪ್ರಾಣ ಉಳಿಸಬೇಕೆಂಬ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ವ್ಯಾಟ್ಸ್‌ಆ್ಯಪ್‌ಗಳಲ್ಲಿ ಸಾವಿರಾರು ಜನರಿಗೆ ರಕ್ತದಾನ ಶಿಬಿರದ ಮಾಹಿತಿ ಸಿಗುವಂತೆ ರೂಪುರೇಷೆಗಳನ್ನು ಸಿದ್ಧಪಡಿಸಿ ಪ್ರಚಾರವನ್ನು ಕೈಗೊಳ್ಳಲಾಗಿದೆ. ಆಟೋಗಳಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿ ಶಿಬಿರದ ಮಾಹಿತಿಯನ್ನು ನೀಡಲಾಗುತ್ತಿದೆ. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದಾಖಲೆ ಪ್ರಮಾಣದಲ್ಲಿ ರಕ್ತ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ.
ರಕ್ತದಾನ ಶಿಬಿರ ಯಶಸ್ವಿಗೆ ಎಲ್ಲ ಪಕ್ಷಗಳ ಮುಖಂಡರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಿಬಿರ ಯಶಸ್ವಿಗೆ ಹಗಲಿರುಳು ಶ್ರಮಿಸುತ್ತಿದ್ದು ಶಿಬಿರಕ್ಕೆ ಬೇಕಾದ ಖರ್ಚು ವೆಚ್ಚಗಳನ್ನು ಸ್ವ ಇಚ್ಛೆಯಿಂದಲೇ ಕೆಲವೊಂದು ಜವಾಬ್ದಾರಿಯನ್ನು ತೆಗೆದುಕೊಂಡು ನಿರ್ವಹಿಸುತ್ತಿದ್ದಾರೆ.