ಬೀದಿ ಬದಿ ವ್ಯಾಪಾರಿಗಳಿಗೆ ಪೇಪರ್ ಬ್ಯಾಗ್ ನೀಡಿ ಜಾಗೃತಿ

HUN-JULY-12-3(TALENT SCHOOL PROGRAMME)
Published on

ಹುಣಸೂರು: ವಿಶ್ವ ಪೇಪರ್ ಬ್ಯಾಗ್ ದಿನದ ಅಂಗವಾಗಿ ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ತಾವು ತಯಾರಿಸಿದ ಪೇಪರ್ ಬ್ಯಾಗ್‌ಗಳನ್ನು ಬೀದಿಬದಿ ವ್ಯಾಪಾರಿಗಳಿಗೆ ಹಂಚುವ ಮೂಲಕ ಅರಿವು ಮೂಡಿಸಿದರು.

ಶನಿವಾರ ನಗರವ್ಯಾಪ್ತಿಯಲ್ಲಿ ಸಂಚರಿಸಿದ ವಿದ್ಯಾರ್ಥಿಗಳು ಬೀದಿಬದಿಯ ವ್ಯಾಪಾರಿಗಳಿಗೆ ಪೇಪರ್ ಬ್ಯಾಗ್‌ಗಳನ್ನು ನೀಡಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸದಂತೆ ಕೋರಿದರು. ಈ ವೇಳೆ ಮಾತನಾಡಿದ ಸಂಸ್ಥೆಯ ಉಪ ಪ್ರಾಂಶುಪಾಲ ಜಗದೀಶ್, ವಿಶ್ವವನ್ನೇ ಕಾಡುತ್ತಿರುವ ಪ್ಲಾಸ್ಟಿಕ್ ಮಾಲಿನ್ಯದಿಂದ ಹೊರಬರಲು ನಾವೆಲ್ಲರೂ ಪೇಪರ್ ಬ್ಯಾಗ್‌ಗಳನ್ನು ಉಪಯೋಗಿಸುವ ಮೂಲಕ ಮೊದಲ ಹೆಜ್ಜೆ ಇಡಬೇಕಿದೆ. ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆಯಿಂದಾಗಿ ಜಾನುವಾರುಗಳು ಜೀವ ಕಳೆದುಕೊಳ್ಳುತ್ತಿದ್ದರೆ, ನಿಧಾನವಾಗಿ ವಿಷ ನಮ್ಮ ದೇಹದ ಒಡಲನ್ನು ಸೇರುತ್ತಿದೆ. ನೀರಿನಲ್ಲಿ ಜಲಚರಿಗಳು ಪ್ಲಾಸ್ಟಿಕ್ ತಿನ್ನುವ ಮೂಲಕ ಮರಣ ಹೊಂದುತ್ತಿವೆ. ಇದೆಲ್ಲಕ್ಕೂ ಪರಿಹಾರವೆಂದರೆ ಪರಿಸರ ಸ್ನೇಹಿ ಪೇಪರ್ ಬ್ಯಾಗ್‌ಗಳನ್ನು ಉಪಯೋಗಿಸುವುದಾಗಿದೆ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕಿದೆ. 1852ರಲ್ಲಿ ಫ್ರಾನ್ಸಿಸ್ ವೋಲೇ ಪೇಪರ್ ಬ್ಯಾಗ್‌ಗಳ ತಯಾರಿಕಾ ಯಂತ್ರ ಕಂಡುಹಿಡಿದನು. ಆದರೆ, ಪ್ಲಾಸ್ಟಿಕ್‌ಬಳಕೆಯ ಅವಾಂತರಗಳ ಪರಿಣಾಮಗಳನ್ನು ನಾವು ಇದೀಗ ಅನುಭವಿಸುತಿದ್ದು, ಇನ್ನು ಮುಂದಾದರೂ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಲ್ಲಬೇಕಿದೆ ಎಂದರು.

ವಿದ್ಯಾರ್ಥಿಗಳು ನಗರದ ವಿವಿಧ ರಸ್ತೆ ಬದಿಗಳಲ್ಲಿ ಇದ್ದ ಬೀದಿಬದಿ ವ್ಯಾಪಾರಿಗಳಿಗೆ ತಾವು ತಯಾರಿಸಿದ ಪೇಪರ್ ಬ್ಯಾಗ್‌ಗಳನ್ನು ನೀಡಿ ಪ್ಲಾಸ್ಟಿಕ್ ನಿಷೇಧಕ್ಕೆ ಸಹಕರಿಸಲು ಕೋರಿದರು. ಈ ವೇಳೆ ಉಪನ್ಯಾಸಕರಾದ ಅರ್ಚನಾ, ಚೈತ್ರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net