

ಮೈಸೂರು: ರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತದಿನ ಅಂಗವಾಗಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಹಾಗೂ ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್‌ನಿಂದ ದೇವರಾಜ ಮಾರುಕಟ್ಟೆ ಮುಂಭಾಗ ಪ್ಲಾಸ್ಟಿಕ್ ಬ್ಯಾಗ್ ತ್ಯಜಿಸಿ ಬಟ್ಟೆ ಬ್ಯಾಗ್ ಬಳಸಿ ಘೋಷವಾಕ್ಯದೊಂದಿಗೆ ಗ್ರಾಹಕರಿಗೆ ಬಟ್ಟೆ ಬ್ಯಾಗುಗಳನ್ನು ಉಚಿತವಾಗಿ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಪ್ರತಿಯೊಬ್ಬರೂ ತ್ಯಜಿಸಬೇಕು. ಆ ಮೂಲಕ ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಪ್ಲಾಸ್ಟಿಕ್ ನಿಷೇಧ ಹಾಗೂ ಪರಿಸರ ರಕ್ಷಣೆ ಜವಾಬ್ದಾರಿ ಕೇವಲ ಸರ್ಕಾರ ಹಾಗೂ ಸ್ಥಳೀಯ ಆಡಳಿತದ್ದು ಎಂಬ ಮನೋಭಾವದಿಂದ ಹೊರಬರಬೇಕು. ಸಾರ್ವಜನಿಕರು ತಮ್ಮ ಹೊಣೆ ಅರಿತು ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಪ್ಲಾಸ್ಟಿಕ್ ಬ್ಯಾಗುಗಳು ಹಾಗೂ ವಸ್ತುಗಳನ್ನು ಬಳಸುವುದನ್ನು ನಿಲ್ಲಿಸಿ ಸುಂದರ ಪರಿಸರ ನಿರ್ಮಿಸಿ, ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ ಬಟ್ಟೆ, ಕಾಗದ ಹಾಗೂ ಇತರ ಪರಿಸರಸ್ನೇಹಿ ಕೈಚೀಲ ಬಳಸಿ ಪ್ಲಾಸ್ಟಿಕ್‌ನಿಂದ ಪರಿಸರವನ್ನು ದೂರವಿಡಿ ಎಂದು ಕೋರಿದರು.
ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ಕುಮಾರ್ ಮಾತನಾಡಿ, ಮುಂದಿನ ಪೀಳಿಗೆಗೆ ಪ್ಲಾಸ್ಟಿಕ್ ಮುಕ್ತ ಪರಿಸರ ಕೊಡುಗೆಯಾಗಿ ನೀಡಲು ನಾವೆಲ್ಲ ಇಂದೇ ಶಪಥ ಮಾಡಬೇಕಿದೆ. ಮೊದಲು ಮನೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿ ಮಾಡುವ ಮೂಲಕ ಪರಿಸರ ಸ್ವಚ್ಛಗೊಳಿಸಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಗರದ ವಿವಿಧ ಸಂಘಸಂಸ್ಥೆಗಳು ಆಯೋಜಿಸಿದರೆ ಹೆಚ್ಚು ಜನರನ್ನು ತಲುಪಲು ಸಹಕಾರಿಯಾಗುತ್ತದೆ ಎಂದರು.
ಮುಖಂಡರಾದ ಎಸ್.ಎನ್.ರಾಜೇಶ್, ರವಿಚಂದ್ರ, ಹರೀಶ್‌ನಾಯ್ಡು, ದುರ್ಗಾ ಪ್ರಸಾದ್, ರಾಕೇಶ್, ಶ್ರೀಕಾಂತ್ ಕಶ್ಯಪ್ ಇತರರು ಇದ್ದರು.