ರೈತರು ಸಾವಯವ ಕೃಷಿಗೆ ಒತ್ತು ಕೊಡಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

1
Published on

ಮಂಡ್ಯ: ರೈತರು ಸಿರಿಧಾನ್ಯ ಬೆಳೆಯುವ ಸಂಸ್ಕೃತಿ ಹೆಚ್ಚಿಸುವ ಮೂಲಕ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ರಾಜ್ಯಮಟ್ಟದ ಸಿರಿಧಾನ್ಯ ಮೇಳ ಹಾಗೂ ಬೆಲ್ಲದ ಪರಿಷೆ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಿರಿಧಾನ್ಯ ನಡಿಗೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಸಾವಯವ ಬೆಳೆ ಬೆಳೆಯುವುದನ್ನು ಹೆಚ್ಚು ಮಾಡುವುದರ ಜತೆಗೆ ಮಾರುಕಟ್ಟೆ ಸೌಲಭ್ಯ ಸಿಗಬೇಕು. ಅಂತೆಯೇ ಹೊಸ ತಂತ್ರಜ್ಞಾನದ ಜ್ಞಾನ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಸಿರಿಧಾನ್ಯ ಮೇಳದ ಉದ್ದೇಶವಾಗಿದೆ. 2023 ಅನ್ನು ಸಿರಿಧಾನ್ಯ ವರ್ಷವೆಂದು ಘೋಷಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಿರಿಧಾನ್ಯ ಮೇಳ ಆಯೋಜಿಸಲಾಗಿದ್ದು, ರೈತರಿಗೆ ಉಪಯುಕ್ತ ಮಾಹಿತಿ ನೀಡಲಾಗುವುದು ಎಂದರು.

ಮೇಳದಲ್ಲಿ 3000ಕ್ಕೂ ಹೆಚ್ಚು ಪ್ರಗತಿಪರ ರೈತರು ಹಾಗೂ ಸಿರಿಧಾನ್ಯ ಬೆಳೆಗಾರರು, ರೈತ ಉತ್ಪಾದಕ ಸಂಸ್ಥೆಗಳು, ಸಂಸ್ಕರಣೆದಾರರು, ಬೆಲ್ಲ ಉತ್ಪಾದಕರು, ಕಿರು ಉದ್ದಿಮೆದಾರರು, ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ 3000ಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. 135 ವಸ್ತು ಪ್ರದರ್ಶನ ಮಳಿಗೆ ಪ್ರಾರಂಭಿಸಲಿದ್ದು, ರೈತರಿಗೆ ಮಾಹಿತಿ ನೀಡಲಾಗುವುದು. ಬೆಲ್ಲದ ಪರಿಷೆಗೆ 20 ಮಳಿಗೆ, ಆಹಾರ ಮೇಳದ ಮಳಿಗೆ 15, ಇತರೆ ಜಿಲ್ಲೆಗಳ ಪಿಎಂಎಫ್‌ಎಂಇ ಯೋಜನೆ ಫಲಾನುಭವಿಗೆ 38 ಮಳಿಗೆ, ರೈತ ಉತ್ಪಾದಕ ಸಂಸ್ಥೆಗಳಿಗೆ 20 ಮಳಿಗೆ, ಎನ್‌ಆರ್‌ಎಲ್ಎಂ 4 ಮಳಿಗೆ, ಇತರೆ ಸ್ವಸಹಾಯ ಸಂಘಗಳಿಗೆ 10 ಮಳಿಗೆ, ಕೃಷಿ ಸಂಸ್ಕರಣಾ ಘಟಕ ತಯಾರಕರಿಗೆ 6 ಮಳಿಗೆಯನ್ನು ವಸ್ತು ಪ್ರದರ್ಶನಕ್ಕೆ ಮೀಸಲಿಡಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಉಪ ನಿರ್ದೇಶಕಿ ಮಾಲತಿ, ಸಹಾಯಕ ನಿರ್ದೇಶಕರಾದ ಮಮತಾ, ಸೌಮ್ಯಶ್ರೀ ಇತರರಿದ್ದರು.

ಡಿಸಿ ಕಚೇರಿಯಿಂದ ಚಾಲನೆಗೊಂಡ ನಡಿಗೆ ನಗರದ ಎಂ.ಸಿ ರಸ್ತೆ ಮೂಲಕ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸಾಗಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹತ್ತಿರದ ಡಾ.ರಾಜ್‌ಕುಮಾರ್ ಬಡಾವಣೆ ಮೈದಾನದಲ್ಲಿ ಸಮಾರೋಪಗೊಂಡಿತು. ನಡಿಗೆಯ ಉದ್ದಕ್ಕೂ ಸಿರಿಧಾನ್ಯದ ಮಹತ್ವ ಸಾರುವ ಜಾಗೃತಿ ಫಲಕ ಪ್ರದರ್ಶಿಸಲಾಯಿತು. ಡಿಸಿ, ಎಡಿಸಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ನಡಿಗೆಯಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net