

ಕೆ.ಆರ್.ನಗರ: ಮೈಸೂರು ಅರಸರಿಂದ ಯೋಜನಾಬದ್ಧವಾಗಿ ನಿರ್ಮಾಣಗೊಂಡಿರುವ ಕೆ.ಆರ್.ನಗರ ಸ್ವಚ್ಛತಾ ಸರ್ವೇಕ್ಷಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಈ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಇಲ್ಲಿನ ಪುರಸಭೆ ‘ಸ್ವಚ್ಛ ಕೆ.ಆರ್.ನಗರ, ಸುಂದರ ನಗರ’ ಎಂಬ ಘೋಷ ವಾಕ್ಯದೊಂದಿಗೆ ತ್ಯಾಜ್ಯ ಬೀಳುವ ಸ್ಥಳಗಳಲ್ಲಿ ಸೂಚನಾ ಫಲಕವನ್ನು ಅಳವಡಿಸಿ, ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಕಳೆದ 2018, 2019, 2020 ಸಾಲಿನಲ್ಲಿ ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಿರಂತರವಾಗಿ ‘ಸ್ವಚ್ಛ ನಗರಿ’ ಪ್ರಶಸ್ತಿ ಗಳಿಸುವ ಮೂಲಕ ಸಾಧನೆ ಮಾಡಿದೆ. ವರ್ಷಗಳು ಕಳೆದಂತೆ ಕೆ.ಆರ್.ನಗರ ಪಟ್ಟಣ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡು ದೊಡ್ಡ ನಗರವಾಗಿ ಬೆಳೆಯುತ್ತಿದೆ. ಹೀಗೆ ವಿಸ್ತಾರಗೊಳ್ಳುತ್ತಿರುವ ನಗರ ಪ್ರದೇಶದಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುವುದು ಸ್ಥಳೀಯ ಸಂಸ್ಥೆಯಾದ ಪುರಸಭೆ ಕರ್ತವ್ಯವಾಗಿದೆ.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿರುವ ಕೆ.ಆರ್.ನಗರ ಪುರಸಭೆ ನೂರಾರು ಪೌರಕಾರ್ಮಿಕ ಸಿಬ್ಬಂದಿಯನ್ನು ಬಳಸಿಕೊಂಡು ದಿನನಿತ್ಯ ಬೀದಿಗಳು, ಸಾರ್ವಜನಿಕ ಸ್ಥಳಗಳು, ಬಡಾವಣೆಗಳು ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿದೆ. ಶೇಖರಣೆಗೊಂಡ ಕಸ ಮತ್ತು ತ್ಯಾಜ್ಯವನ್ನು ಕಸ ಸಂಗ್ರಹ ವಾಹನಗಳ ಮೂಲಕ ಪಟ್ಟಣದ ಹೊರವಲಯದಲ್ಲಿರುವ ಕಸ ಸಂಗ್ರಹಣ ಘಟಕಕ್ಕೆ ಸಾಗಿಸಿ, ಅಲ್ಲಿ ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ.
ರಸ್ತೆ ಬದಿಯಲ್ಲಿ ಬೀಳುತ್ತಿದೆ ಕಸ: ಪಟ್ಟಣದ 23 ವಾರ್ಡ್‌ಗಳ ಪ್ರತಿ ಮನೆಗೆ ಕೆ.ಆರ್.ನಗರ ಪುರಸಭೆ ವತಿಯಿಂದ ಹಸಿ ಕಸ, ಒಣ ಕಸ ಬೇರ್ಪಡಿಸುವ ಉದ್ದೇಶದಿಂದ ಕಸದ ಬುಟ್ಟಿಗಳನ್ನು ವಿತರಿಸಲಾಗಿದೆ. ಪ್ರತಿನಿತ್ಯ ತಮ್ಮ ಮನೆಗಳ ಬಳಿ ಬರುವ ಕಸದ ವಾಹನಗಳಿಗೆ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ನಿವಾಸಿಗಳು ನೀಡಿ ಸಹಕರಿಸುತ್ತಿದ್ದಾರೆ. ಮತ್ತೊಂದೆಡೆ ಕೆಲವು ತಿಳಿಗೇಡಿಗಳು ಪುರಸಭೆಯ ಇಂತಹ ಸೂಚನೆಗೂ ಮನ್ನಣೆ ನೀಡದೆ ಮನೆ ಬಾಗಿಲಿಗೆ ಬರುವ ಕಸದ ವಾಹನಗಳಿಗೆ ಕಸವನ್ನು ನೀಡದೆ ಬೇಕಾಬಿಟ್ಟಿಯಾಗಿ ರಸ್ತೆಗಳ ಹಂಚಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತಂದು ಸುರಿದು ರಾಶಿ ಹಾಕಿ ತಿಪ್ಪೆಗಳಾಗಿ ಮಾರ್ಪಾಡಾಗುತ್ತಿರುವುದು ಪುರಸಭೆಗೆ ತಲೆ ನೋವಾಗಿ ಪರಿಣಮಿಸಿದೆ.
ಪಟ್ಟಣದ ಕೇಂದ್ರ ಭಾಗದ ಕೆಲ ಸ್ಥಳಗಳಲ್ಲಿ ಬಿದ್ದಿರುವ ಕಸದ ರಾಶಿ ದಿನ ನಿತ್ಯ ತೆರವುಗೊಳಿಸಿದರೂ ಸ್ಥಳೀಯ ನಿವಾಸಿಗಳು ಪದೇ ಪದೆ ಕಸ ಸುರಿಯುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇನ್ನು ಹೋಟೆಲ್‌ಗಳು, ಬೇಕರಿಗಳು ಹಾಗೂ ಹಣ್ಣಿನ ಅಂಗಡಿಗಳ ವ್ಯಾಪಾರಿಗಳು ಕಸವನ್ನು ಎಲ್ಲೆಂದರಲ್ಲಿ ಬಿಸಾಡಿ ಪುರಸಭೆ ಸ್ವಚ್ಛತಾ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಬೇಕರಿ, ಅಂಗಡಿಗಳ ಮಾಲೀಕರಿಗೆ ಪುರಸಭೆ ಅಧಿಕಾರಿಗಳು ದಂಡ ವಿಧಿಸಿದ್ದರೂ ಕ್ಯಾರೆ ಎನ್ನದ ಕೆಲ ವರ್ತಕರು ಹಾಗೂ ಸ್ಥಳೀಯ ಜನರು ಕಸ ಹಾಕುವುದನ್ನು ಮುಂದುವರಿಸಿದ್ದರು. ಇದನ್ನು ತಡೆಗಟ್ಟಲು ಪುರಸಭಾ ಅಧಿಕಾರಿಗಳು ಆಯಾಕಟ್ಟಿನ ಸ್ಥಳದಲ್ಲಿ ಸೂಚನಾ ಫಲಕವನ್ನು ಅಳವಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.