ಪಕ್ಷಿಗಳಿಗಾಗಿ ಮರಕ್ಕೆ ಆಹಾರ ಡಬ್ಬ ನೇತು ಹಾಕಿ ಜನರಲ್ಲಿ ಜಾಗೃತಿ

22
Published on

ಮೈಸೂರು: ನಗರದ ನ್ಯಾಯಾಲಯದ ಎದುರಿನ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿರುವ ಮರಗಳಿಗೆ ಮಂಗಳವಾರ ಪಕ್ಷಿಗಳಿಗಾಗಿ ನೀರು, ಆಹಾರದ ಡಬ್ಬಗಳನ್ನು ನೇತು ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮಕ್ಕೆ ಪರಿಸರ ಪ್ರೇಮಿ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ ಅವರು ಡಬ್ಬಿಗಳಿಗೆ ಆಹಾರ ಧಾನ್ಯ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮನೆಯ ಮೇಲೆ ಅಥವಾ ಮನೆಯ ಮುಂದೆ ಪಕ್ಷಿ ಪ್ರಾಣಿಗಳಿಗೆ ನೀರಿನ ಬಟ್ಟಲು ಇಡಿ ಎಂದು ದರ್ಶನ್ ಅವರು ಅಭಿಮಾನಿಗಳಿಗೆ ಸಂದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷಿ ಸಂರಕ್ಷಿಸಲು ನೀರಿನ ಬಟ್ಟಲು ಮರಗಳಿಗೆ ಅಳವಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಪ್ರಾಣಿಪ್ರಿಯರಾಗಿರುವ ದರ್ಶನ್, ಮೃಗಾಲಯದಲ್ಲಿ ಪ್ರಾಣಿ ದತ್ತು ಸ್ವೀಕರಿಸುವುದು, ಪ್ರಾಣಿ, ಪಕ್ಷಿ ಸಾಕುವುದು, ಕಾಡಿನಲ್ಲಿ ಸುತ್ತಿ ವನ್ಯಜೀವಿ ಛಾಯಾಚಿತ್ರಗಳನ್ನು ತೆಗೆಯುವುದು ಸೇರಿದಂತೆ ಪ್ರಕೃತಿಯೊಂದಿಗೆ ಪ್ರೀತಿ ಬೆಳೆಸಿಕೊಂಡಿದ್ದಾರೆ. ಇದನ್ನು ಅವರ ಅಭಿಮಾನಿಗಳು ಸ್ಫೂರ್ತಿಯಾಗಿ ತೆಗೆದುಕೊಂಡು ಪಾಲಿಸಬೇಕು ಎಂದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಸಕಲ ಜೀವರಾಶಿಗಳಲ್ಲಿ ದೇವರನ್ನು ಕಾಣು ಎಂದು ನಮ್ಮ ಪೂರ್ವಜರು ತಿಳಿಸಿದ್ದಾರೆ. ಪಕ್ಷಿಗಳಿಗೆ ಹಿಡಿಸುವ ನವಣೆ, ಕಡಲೆ ಹೊಟ್ಟು, ಅಕ್ಕಿ ನುಚ್ಚು ಹಾಗೂ ಆಹಾರದ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಮರಗಳಿಗೆ ಮೊಳೆ ಹೊಡೆಯದೆ ರೆಂಬೆ, ಕೊಂಬೆಗಳಿಗೆ ಡಬ್ಬಗಳನ್ನು ನೇತು ಹಾಕಬೇಕು ಎಂದು ಸಲಹೆ ನೀಡಿದರು.
ಪಿಂಜ್ರಾಪೋಲ್‌ನ ಎಸ್.ಕೆ. ಮಿತ್ತಲ್, ವಕೀಲರ ಸಂಘದ ಉಪಾಧ್ಯಕ್ಷ ಉಮೇಶ್, ದರ್ಶನ್ ಅಭಿಮಾನಿ ಬಳಗದ ಸಂಚಾಲಕ ಭೈರತಿ ಲಿಂಗರಾಜು, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುಖಂಡರಾದ ಪ್ರಕಾಶ್‌ಪ್ರಿಯದರ್ಶನ್, ಜಿ.ರಾಘವೇಂದ್ರ, ಕಡಕೊಳ ಜಗದೀಶ್, ಎಸ್.ಎನ್.ರಾಜೇಶ್, ರಾಕೇಶ್, ಸುಚಿಂದ್ರ, ವಿಜಯ್ ನಾಯಕ್, ಭಾಸ್ಕರ್, ಸಿದ್ದರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net