

ಬೆಂಗಳೂರು: ದೇಶದ ಅಭಿವೃದ್ಧಿಯಲ್ಲಿ ಜನಸಂಖ್ಯೆಯು ಪ್ರಮುಖ ಪಾತ್ರ ವಹಿಸಲಿದೆ. ಆದರೂ, ಜನಸಂಖ್ಯೆ ನಿಯಂತ್ರಣದ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ ಬಿಬಿಎಂಪಿ ವಿಶೇಷ ಆಯುಕ್ತ ಹಾಗೂ ಆರೋಗ್ಯ ವಿಭಾಗದ ಮುಖ್ಯಸ್ಥ ಸುರಳ್ಕರ್ ವಿಕಾಸ್ ಕಿಶೋರ್ ಅಭಿಪ್ರಾಯಪಟ್ಟರು.
ಬಿಬಿಎಂಪಿಯಿಂದ ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ನಗರದ ಪುರಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕುಟುಂಬ ಯೋಜನೆಯ ಕುರಿತು ನಾವು ನಾಗರಿಕರಿಗೆ ಅರಿವು ಮೂಡಿಸಬೇಕಿದೆ. ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಚೀನಾ ಮೊದಲ ಸ್ಥಾನದಲ್ಲಿದ್ದು, ಭಾರತ 2ನೇ ಸ್ಥಾನದಲಿದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಜನಸಂಖ್ಯೆ ಏರಿಕೆಯನ್ನು ತಡೆಗಟ್ಟಬೇಕಿದೆ ಎಂದರು.
ಕುಟುಂಬದಲ್ಲಿ ಹೆಚ್ಚು ಮಕ್ಕಳಿದ್ದರೆ ನಾವು ಆ ಮಕ್ಕಳಿಗೆ ಗುಣಮಟ್ಟದ ಜೀವನ ಒದಗಿಸಲು ಕಷ್ಟವಾಗುತ್ತದೆ. ಕಡಿಮೆ ಸಂಖ್ಯೆಯ ಮಕ್ಕಳಿದ್ದಲ್ಲಿ ಅವರಿಗೆ ಉತ್ತಮ ಜೀವನವನ್ನು ರೂಪಿಸಿಕೊಡಬಹುದು. ಈ ನಿಟ್ಟಿನಲ್ಲಿ ಎಲ್ಲ ಪೋಷಕರು ಜನಸಂಖ್ಯೆ ನಿಯಂತ್ರಣಕ್ಕೆ ಕೈಜೋಡಿಸಬೇಕಿದೆ ಎಂದು ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ, ಡಾ. ನಿರ್ಮಲಾ ಬುಗ್ಗಿ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆ್ ಇಂಡಿಯಾದ ಅಧ್ಯಕ್ಷೆ ಡಾ. ಪದ್ಮಿನಿ ಪ್ರಸಾದ್, ಗಾಯಕ ಶಶಿಧರ್ ಕೋಟೆ, ಹಾಸ್ಯ ಸಾಹಿತಿ ಸುಧಾ ಬರಗೂರು ಸೇರಿ ಮತ್ತಿತರರಿದ್ದರು.
ವಿಜೇತರಿಗೆ ಬಹುಮಾನ ವಿತರಣೆ:
ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಜನಸಂಖ್ಯೆ ನಿಯಂತ್ರಣ, ಕುಟುಂಬ ಯೋಜನೆಗಳು ಸೇರಿ ಇನ್ನಿತರ ವಿಷಯಗಳ ಕುರಿತು ಸಾಕ್ಷ್ಯಾಚಿತ್ರ, ರೀಲ್ಸ್, ಪೋಸ್ಟರ್ ಸಿದ್ದಪಡಿಸುವ ಕುರಿತು ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ನಾಗರಿಕರು ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.