

ಮಂಡ್ಯ: ನಗರದ ವಿವಿಧೆಡೆ ಟ್ರಾಫಿಕ್ ಠಾಣೆ ಪೊಲೀಸರು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಸಾರ್ವಜನಿಕರು ಪ್ರತಿದಿನ ವಾಹನ ಚಾಲನೆ ಮಾಡುವಾಗ ಸಂಚಾರ ನಿಯಮಗಳ ಅರಿವಿಲ್ಲದೆ ಅಪಘಾತ ಸಂಭವಿಸುತ್ತಿವೆ. ಮಾತ್ರವಲ್ಲದೆ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಪಘಾತ ತಡೆಯುವ ಉದ್ದೇಶದಿಂದ ಹಾಗೂ ಸುಗಮ ಸಂಚಾರಗೊಳಿಸಲು ಸಂಚಾರ ನಿಯಮಗಳನ್ನು ತಿಳಿದುಕೊಳ್ಳುವುದು ಅಗತ್ಯ ಎಂದು ಅರಿವು ಮೂಡಿಸಿದರು.
ಪ್ರಮುಖವಾಗಿ ಮದ್ಯಸೇವಿಸಿ ವಾಹನ ಚಾಲನೆ ಮಾಡಬಾರದು. ನಿಮ್ಮ ಕುಟುಂಬಕ್ಕೆ ನೀವೇ ಆಧಾರ ಎಂಬುದನ್ನು ಮರೆಯಬಾರದು. ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಬೇಡಿ, ಅಪಘಾತವಾದರೆ ನಿಮ್ಮನ್ನು ರಕ್ಷಣೆ ಮಾಡುವವರು ಯಾರು?. ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿ ದುರಾದೃಷ್ಟವಶಾತ್ ಅಪಘಾತವಾದರೆ ಪೂರ್ಣ ಪ್ರಮಾಣದ ಪರಿಹಾರವನ್ನು ವಾಹನದ ಮಾಲೀಕರೇ ಭರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಟ್ರಾಫಿಕ್ ಎಎಸ್‌ಐಗಳಾದ ಗುರುದೇವ್, ಚಂದ್ರಶೇಖರ್, ಪೇದೆ ಚಂದ್ರಶೇಖರ್ ಇದ್ದರು.