ನಾಗರಬಾವಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಕುರಿತು ಜಾಗೃತಿ

ganesh students
Published on

ಬೆಂಗಳೂರು: ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆರ್.ಆರ್. ನಗರ ವಲಯ ಆಯುಕ್ತ ಸತೀಶ್ ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

ಆರ್.ಆರ್. ನಗರ ವಲಯದ ನಾಗರಬಾವಿ ವ್ಯಾಪ್ತಿಯಲ್ಲಿನ ಜೆಇಎಸ್ ಮಹಾವಿದ್ಯಾಲಯದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಯ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದರು.

ಗೌರಿ ಗಣೇಶ ಹಬ್ಬದಲ್ಲಿ ರಾಸಾಯನಿಕ ಬಣ್ಣಗಳು, ಪ್ಲಾಸ್ಟರ್ ಆಫ್​​ ಪ್ಯಾರಿಸ್ (ಪಿಓಪಿ) ವಸ್ತುಗಳನ್ನು ಬಳಸಿ ತಯಾರಿಸುವ ಗಣೇಶ ಮೂರ್ತಿಗಳನ್ನಿಟ್ಟು ಪೂಜಿಸುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಮಣ್ಣಿನಿಂದ ತಯಾರಿಸಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರಸ್ನೇಹಿಯಾಗಿ ಹಬ್ಬವನ್ನು ಆಚರಿಸಬೇಕು. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಶಿಬಿರದಲ್ಲಿ 160 ವಿದ್ಯಾರ್ಥಿಗಳು ಭಾಗಿ:

ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಜೆಇಎಸ್ ಶಾಲೆಯಲ್ಲಿ ಸುಮಾರು 160 ವಿದ್ಯಾರ್ಥಿಗಳು ಮೂರ್ತಿ ಕಲಿಕಾ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಪಾಲಿಕೆಯ ಕಲಾ ಶಿಕ್ಷಕರು ಹಾಗೂ ಚಿತ್ರಕಲಾ ಪರಿಷತ್‌ನ ಪರಿಣಿತರು ವಿದ್ಯಾರ್ಥಿಗಳಿಗೆ ಗಣೇಶ ಮೂರ್ತಿ ತಯಾರಿಸುವುದನ್ನು ಹೇಳಿಕೊಟ್ಟರು.

ಈ ವೇಳೆ ಆರ್.ಆರ್. ನಗರ ವಲಯ ಜಂಟಿ ಆಯುಕ್ತ ಅಜಯ್, ಮುಖ್ಯ ಅಭಿಯಂತರ ಸ್ವಯಂಪ್ರಭಾ, ಶಾಲಾ ಪ್ರಾಂಶುಪಾಲರು, ವಿದ್ಯಾರ್ಥಿಗಳು ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net