

ಕೆಜಿಎಫ್: ಧೂಮಪಾನ ಮತ್ತು ಹೊಗೆರಹಿತ ತಂಬಾಕು ಉತ್ಪನ್ನಗಳು ಸೇರಿ ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯದ ಉಂಟಾಗುವ ಅಪಾಯಗಳ ಬಗ್ಗೆ ಯುವ ಸಮುದಾಯಕ್ಕೆ ಅರಿವು ಮೂಡಿಸಬೇಕು ಎಂದು 2ನೇ ಅಪರ ಸಿವಿಲ್ ನ್ಯಾಯಾಧೀಶ ವಿನೋದ್ಕುಮಾರ್ ತಿಳಿಸಿದರು.
ನಗರದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಶ್ರೀ ಮಹಾವೀರ್ ಜೈನ್ ಕಾಲೇಜಿನಿಂದ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.
ತಂಬಾಕು ಸೇವನೆಯಿಂದಾಗುವ ಹಾನಿ, ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ತಂಬಾಕು ಸೇವನೆ ಕಡಿಮೆ ಮಾಡಲು ಪರಿಣಾಮಕಾರಿ ನೀತಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದಲ್ಲಿ ಪಾಲಿಸಲಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಅಪಾರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಪ್ರಾಪ್ತ ಬಾಲಕರು ಬಾಲ ನ್ಯಾಯಲಯಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಕುರಿತು ಜಾಗೃತಿ ಮೂಡಿಸುವ ಅವಶ್ಯ ಇದೆ ಎಂದರು.
ಜೈನ್ ಕಾಲೇಜಿನ ಪ್ರಾಂಶುಪಾಲೆ ರೇಖಾಸೇಥಿ ಮಾತನಾಡಿ, ತಂಬಾಕು ಸೆವನೆಯಿಂದ ಕ್ಯಾನ್ಸರ್, ಹೃದಯ ರಕ್ತನಾಳದ ಸಮಸ್ಯೆಗಳು ಮತ್ತು ಉಸಿರಾಟದ ಸಮಸ್ಯೆಗಳಂತಹ ಕಾಯಿಲೆಗಳು ಉದ್ಭವಿಸುತ್ತವೆ. ತಂಬಾಕು ಸೇವನೆಯಿಂದಾಗುವ ಸಮಸ್ಯೆಗಳ ಕುರಿತು ಯುವ ಸಮುದಾಯಕ್ಕೆ ಜ್ಞಾನ ಮೂಡಿಸಲು ಕಾಲೇಜುಗಳ ವೇದಿಕೆ ಬಳಸಿಕೊಳ್ಳಲಾಗುತ್ತಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ಪ್ರತಿ ವರ್ಷ ತಂಬಾಕು ವಿರೋಧಿ ದಿನಾಚರಣೆ ಬದಲು ಸರ್ಕಾರಗಳು ತಂಬಾಕು ಉತ್ಪನ್ನಗಳನ್ನು ಉತ್ಪಾದನೆ ಮಾಡುವ ಕಾರ್ಖಾನೆಗಳು ಅಥವಾ ತಂಬಾಕು ಬೆಳಯುವುದನ್ನು ನಿಷೇಧ ಮಾಡಿದರೆ ಲಕ್ಷಾಂತರ ಜನರ ಪ್ರಾಣ ಉಳಿಯುತ್ತದೆ. ಇಂತಹ ಕೆಲಸವನ್ನು ಸರ್ಕಾರಗಳು ಮಾಡಬೇಕಿದ್ದು, ಮನುಷ್ಯನ ಜೀವ ತೆಗೆಯುವ ತಂಬಾಕು ಉತ್ಪನ್ನಗಳಿಂದ ಸರ್ಕಾರಗಳು ಲಾಭ ಮಾಡಲು ಹೊರಟಿರುವುದು ದೃರದೃಷ್ಟಕರ ಎಂದರು.
ಡಿವೈಎಸ್ಪಿ ಪಾಂಡುರಂಗ ಮಾತನಾಡಿ, ಪೊಲೀಸರು ಪ್ರತಿದಿನ ಮಾದಕ ವಸ್ತುಗಳ ಬೇಟೆಯಾಡುತ್ತಿದ್ದಾರೆ. ಎಷ್ಟೇ ಕಾನೂನು ಬೀಗಿ ಗೊಳಿಸಿದರೂ ಅಪರಾಧ ಚಟುವಟಿಕೆಗಳನ್ನು ಮಾಡುವವರು ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.