ಗ್ರಾಹಕ ಹಕ್ಕುಗಳ ಬಗ್ಗೆ ಅರಿವು ಅಗತ್ಯ: ನಿವೃತ್ತ ಡಿವೈಎಸ್ಪಿ ಜೆ.ಬಿ.ರಂಗಸ್ವಾಮಿ ಸಲಹೆ

44
Published on

ಮೈಸೂರು: ಯಾವುದೇ ವಸ್ತುಗಳನ್ನು ಖರೀದಿಸುವಾಗ ಮೋಸ ಕಂಡುಬಂದರೆ ಸಾರ್ವಜನಿಕರು ಅದನ್ನು ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕಿದೆ ಎಂದು ನಿವೃತ್ತ ಡಿವೈಎಸ್ಪಿ ಜೆ.ಬಿ.ರಂಗಸ್ವಾಮಿ ಹೇಳಿದರು.
ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದಿಂದ ಜೆ.ಪಿ.ನಗರದ ಪಂಡಿತ್ ಗವಾಯಿ ಸ್ಟೇಡಿಯಂನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲಿ ಅದರಲ್ಲಿನ ಮಾಹಿತಿಯನ್ನು ಗಮನಿಸಬೇಕು. ಪ್ರಮುಖವಾಗಿ ವಸ್ತುವಿನ ದರ, ಅದರ ತಯಾರಿ ಹಾಗೂ ಮುಕ್ತಾಯದ ಅವಧಿ ಬಗ್ಗೆ ನಿಗಾ ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಸಾರ್ವಜನಿಕರಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಇಲ್ಲದೆ ಹೋದಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು. ಆ ಮೂಲಕ ಎಲ್ಲಿ ಹಾಗೂ ಯಾರಿಗೇ ಮೋಸವಾಗುತ್ತಿದ್ದರೂ ಅದನ್ನು ಪ್ರಶ್ನಿಸಬೇಕು ಎಂದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸುವರ್ಣ ಮಹೋತ್ಸವದ ಪ್ರಯುಕ್ತ ಹೊರತರಲಾಗಿರುವ ‘ಗ್ರಾಹಕನೇ ರಾಜ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಚಂದ್ರಶೇಖರ್, ಹಿರಿಯ ಪತ್ರಕರ್ತ ಅನಿಲ್‌ಕುಮಾರ್, ಹಿರಿಯ ವಕೀಲ ರವೀಂದ್ರ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ.ಜಿ.ವಿ.ರವಿಶಂಕರ್, ಜೆ.ಪಿ. ನಗರದ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಉಪಾಧ್ಯಕ್ಷ ಜಯಕುಮಾರ್, ದೊರೆಸ್ವಾಮಿ, ಮಹಿಳಾ ಪ್ರಮುಖ್ ನಾಗಮಣಿ ದರ್ಶನ್ ಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net