

ಬೇಲೂರು : ಭ್ರೂಣ ಹತ್ಯೆ ನಿಯಂತ್ರಣ ಕುರಿತು ಅರಿವು ಮೂಡಿಸಲು ಮಂಗಳವಾರ ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ತಾಲೂಕಿನ ಆಯ್ದ ಗ್ರಾಮಗಳಲ್ಲಿ ಪ್ರಸವ ಪೂರ್ವ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಪ್ರಸವ ಪೂರ್ವ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಭ್ರೂಣ ಹತ್ಯೆ ಹಾಗೂ ಪತ್ತೆಗೆ ಒತ್ತಾಯಿಸುವವರಿಗೂ ಶಿಕ್ಷೆಯಿದೆ. ಭ್ರೂಣಹತ್ಯೆ ಮಾಡುವ ವೈದ್ಯರಿಗೆ, ಜಾಹೀರಾತು ನೀಡುವವರಿಗೆ, ಲ್ಯಾಬ್‌ಗಳಲ್ಲಿ ಪತ್ತೆ ಕಾರ್ಯ ನಡೆಸುವವರಿಗೆ ದಂಡದೊಂದಿಗೆ ಶಿಕ್ಷೆಯೂ ಇದೆ. ಹಾಗಾಗಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಲಿಂಗ ಸಮಾನತೆಯನ್ನು ಕಾಪಾಡುವ ಜವಾಬ್ದಾರಿ ಎಲ್ಲರಿಗೂ ಇದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ಬೀದಿ ನಾಟಕದ ಜಾನಪದ ಕಲಾತಂಡದ ಕಲಾವಿದ ಗುಂಡುರಾಜ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಯಾನಂದ್, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಮಂಗಳಮ್ಮ, ಸುರಕ್ಷತಾಧಿಕಾರಿಗಳಾದ ಕಾವ್ಯಾ, ನಾಗರತ್ನಮ್ಮ ಮತ್ತು ಸಿಬ್ಬಂದಿ ಇದ್ದರು.