

ಮಂಡ್ಯ: ಕನ್ನಡ ಉಳಿಸಿ ಬೆಳೆಸುತ್ತಿರುವ ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ನಾವೆಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿ ಉನ್ನತ ಮಟ್ಟಕ್ಕೆ ತಲುಪಿರುವುದಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಕೆ.ವಿ.ಶಂಕರಗೌಡ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವಿ.ಡಿ.ಸುವರ್ಣ ಅಭಿಪ್ರಾಯಿಸಿದರು.
ನಗರದ ಪರಿಚಯ ಅತಿಥಿ ಗೃಹದಲ್ಲಿ ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ವತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಶಾಲೆಗಳ ಬಗ್ಗೆ ಕೆಲ ಪಾಲಕರಿಗೆ ತಿರಸ್ಕಾರ ಮನೋಭಾವನೆ ಇದೆ. ಅಲ್ಲಿ ಕಲಿತವರು ಭವಿಷ್ಯದಲ್ಲಿ ಉನ್ನತ ಸ್ಥಾನವನ್ನು ಗಳಿಸುವುದಿಲ್ಲವೆಂಬ ಮೂಢನಂಬಿಕೆ ಇದೆ. ಆದರೆ, ನಾನು ಮತ್ತು ನನ್ನ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಿ ವಿವಿಧ ಹುದ್ದೆ ಅಲಂಕರಿಸಿದ್ದೇವೆ. ಕನ್ನಡವನ್ನು ಉಳಿಸುತ್ತಿರುವ ಸರ್ಕಾರಿ ಶಾಲೆಗಳ ಬಗ್ಗೆ ಪ್ರತಿಯೊಬ್ಬರಿಗೂ ಹೆಮ್ಮೆ ಇರಬೇಕು ಎಂದರು.
ಮಾತೃ ಭಾಷೆಯನ್ನು ಉತ್ತಮವಾಗಿ ಕಲಿತರೆ, ಇತರೆ ಭಾಷೆಯನ್ನೂ ಕೂಡ ಸುಲಲಿತವಾಗಿ ಕಲಿತು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆ. ಆದರೆ, ನಮ್ಮಲ್ಲಿ ಅನೇಕರಿಗೆ ಆಂಗ್ಲ ಭಾಷೆಯಲ್ಲಿ ಕಲಿತರೆ ಮಾತ್ರವೇ ಭವಿಷ್ಯವೆಂಬ ಭ್ರಮೆ ಇದೆ. ಇದು ಹೋಗಬೇಕು. ಮಾತೃಭಾಷೆಯ ಪಾಂಡಿತ್ಯವನ್ನು ಪಡೆದ ನಂತರ ಇತರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ ಎಂದು ಪ್ರತಿಪಾದಿಸಿದರು.
ಕೌಶಲ್ಯ ಮಹಿಳಾ ಮಂಡಳಿ ಅಧ್ಯಕ್ಷ ವಿಜಯ ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಲೆಕ್ಕ ಪರಿಶೋಧಕ ಸಿ.ಆನಂದ್, ಸಂಪನ್ಮೂಲ ವ್ಯಕ್ತಿ ಕೆ.ಪಿ.ಅರುಣಕುಮಾರಿ, ಸಂಸ್ಥೆಯ ಕಾರ್ಯದರ್ಶಿ ಅರುಣ ಕೆಂಪರಾಜು ಇತರರಿದ್ದರು.