ಪ್ರಶಸ್ತಿಗೆ ಅರ್ಹರ ಆಯ್ಕೆಯೂ ಕಷ್ಟದ ಕೆಲಸ: ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರಂಗಪ್ಪ ಹೇಳಿಕೆ

Awards ceremony at PES College Mandya
Published on

ಮಂಡ್ಯ: ಪ್ರಸ್ತುತ ದಿನದಲ್ಲಿ ಸರಿಯಾದ ವ್ಯಕ್ತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳುವುದು ಕಷ್ಟದ ಕೆಲಸವಾಗಿದೆ ಎಂದು ವಿಶ್ರಾಂತ ಕುಲಪತಿ, ಅಂತಾರಾಷ್ಟ್ರೀಯ ವಿಜ್ಞಾನಿ ಡಾ.ಕೆ.ಎಸ್.ರಂಗಪ್ಪ ಅಭಿಪ್ರಾಯಿಸಿದರು.

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಡಾ.ಎಚ್.ಡಿ.ಚೌಡಯ್ಯ ಶಿಕ್ಷಣ, ಸಹಕಾರ ಮತ್ತು ಕ್ರೀಡಾ ಪ್ರಶಸ್ತಿಗಳ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸರ್ಕಾರದ ಮಟ್ಟದಲ್ಲಿ ಪ್ರಶಸ್ತಿಗೆ ಲಾಭಿ ನಡೆಸುವವರನ್ನು ನಾವು ಕಂಡಿದ್ದೇವೆ. ಪ್ರಸ್ತುತದಲ್ಲಿ ಪ್ರಶಸ್ತಿಗಳಿಗೆ ಗೌರವ ಇಲ್ಲದ ಸ್ಥಿತಿಗೆ ತಲುಪಿದ್ದೇವೆ. ಆದರೆ ಇದಕ್ಕೆ ವಿರುದ್ಧವಾಗಿ ಜನತಾ ಶಿಕ್ಷಣ ಟ್ರಸ್ಟ್‌ನವರು ಯೋಗ್ಯರಿಗೆ ಪ್ರಶಸ್ತಿ ನೀಡುತ್ತಿರುವುದರಿಂದಲೇ ಈ ಸಂಸ್ಥೆಯ ಮೇಲೆ ಅಪಾರ ಗೌರವವಿದೆ ಎಂದು ಶ್ಲಾಘಿಸಿಸಿದರು.

ಡಾ.ಎಚ್.ಡಿ.ಚೌಡಯ್ಯ ಅವರು ನಡೆದು ಬಂದ ಹಾದಿ, ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸೇವೆಯನ್ನು ಮರೆಯಲಾಗುವುದಿಲ್ಲ, ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯು ಮೌಲ್ಯಯುತವಾದ ಒಂದು ಕಾಯಕ. ಚೌಡಯ್ಯ ಪ್ರಶಸ್ತಿ ಪಡೆದುಕೊಂಡಿರುವ ರಾಮಸ್ವಾಮಿ ಅವರನ್ನು ಹತ್ತಿರದಿಂದ ಕಂಡಿದ್ದೇನೆ, ಜನತಾ ಶಿಕ್ಷಣ ಸಂಸ್ಥೆಯು ಒಳ್ಳೆಯ ವ್ಯಕ್ತಿ ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಂ.ಕೆ.ರಾಮಸ್ವಾಮಿ, ಕೆ.ವಿ.ಶಂಕರಗೌಡ ಅವರು ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಕೊಡುಗೆಯನ್ನು ಮಂಡ್ಯ ಜಿಲ್ಲೆಗೆ ನೀಡಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯದ ಕೆಲಸ. ಅವರ ಅವಧಿಯಲ್ಲಿ ವಿಶ್ವಕೋಶವು ರೂಪುಗೊಳ್ಳುತ್ತದೆ. ರಾಜ್ಯ ವಿಜ್ಞಾನ ಸಂಸ್ಥೆ, ವಯಸ್ಕರ ಶಿಕ್ಷಣ ಎಂಬಂತೆ ಹಲವು ಬದಲಾವಣೆಯನ್ನು ನಾವು ಕಂಡಿದ್ದೇವೆ. ಗಾಂಧೀಜಿಯವರ ಪರಿಕಲ್ಪನೆಯಂತೆ ಬದುಕಿದ್ದರು. ಅದೇ ಹಾದಿಯಲ್ಲಿ ಚೌಡಯ್ಯ ಅವರು ಹಲವು ಜನಪರ ಕೆಲಸಗಳನ್ನು ಮಾಡಿದ್ದಾರೆ ಎಂದು ಸ್ಮರಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಜನತಾ ಶಿಕ್ಷಣ ಟ್ರಸ್ಟ್ ಉಪಾಧ್ಯಕ್ಷ ಎಂ.ಬಿ.ಶ್ರೀಧರ್, ಡಾ.ಎಚ್.ಡಿ.ಚೌಡಯ್ಯ ಅವರ ಸಮಯ ಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದ್ದಾರೆ, ನೇರನುಡಿಯುಳ್ಳ ಚೌಡಯ್ಯ ಅವರು ರೈತರ ಪರವಾಗಿ ಕೆಲಸ ಮಾಡಿದ್ದಾರೆ. ಸಹಕಾರ ಚಳವಳಿ ಸೇರಿದಂತೆ ಹುಟ್ಟು ಹೋರಾಟಗಾರರಂತೆಯೂ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದರು ಎಂದು ತಿಳಿಸಿದರು.

ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಧರ್ಮದರ್ಶಿ ಎಚ್.ಸಿ.ಮೋಹನ್‌ಕುಮಾರ್ ಇತರರಿದ್ದರು.

ಇದೇ ವೇಳೆ ಎಂ.ಕೆ.ರಾಮಸ್ವಾಮಿ(ಡಾ.ಎಚ್.ಡಿ.ಚೌಡಯ್ಯ ಶಿಕ್ಷಣ), ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಚ್.ಡಿ.ಚೌಡಯ್ಯ ಸಹಕಾರ) ಮತ್ತು ವಿಲ್ಪ್ರೇಡ್ ಡಿಸೋಜ ಅವರಿಗೆ(ಎಚ್.ಡಿ.ಚೌಡಯ್ಯ ಕ್ರೀಡಾ) ಪ್ರಶಸ್ತಿ ಜತೆಗೆ ತಲಾ 20 ಸಾವಿರ ರೂ ನಗದು ಪ್ರದಾನ ಮಾಡಲಾಯಿತು. ಅಂತೆಯೇ ಪ್ರತಿಭಾವಂತ ವಿದ್ಯಾರ್ಥಿಗಳಾದ ಎಚ್.ಪಿ.ಲಲಿತ್, ಎಚ್.ಎಂ.ಪ್ರಜ್ವಲ್, ಕೆ.ಎಸ್.ಪುಣ್ಯಶ್ರೀ, ಎಚ್.ಸಿ.ಚೇತನ್‌ಗೌಡ ಅವರಿಗೆ ತಲಾ 5 ಸಾವಿರ ರೂ ನಗದಿನ ಜತೆಗೆ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net