

ಹಲಗೂರು: ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಎಚ್.ವಿ.ವಿನಯ್ 621 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ನಾಲ್ಕನೇ, ಜಿಲ್ಲೆಗೆ ದ್ವಿತೀಯ ಹಾಗೂ ಮಳವಳ್ಳಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಶಾಲೆ ವತಿಯಿಂದ ಅಭಿನಂದಿಸಲಾಯಿತು.
ಶಾಲೆ ಮುಖ್ಯ ಶಿಕ್ಷಕಿ ಶಕುಂತಲಾ ಮಾತನಾಡಿ, ನಾಲ್ಕು ವರ್ಷಗಳಿಂದ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಕಳೆದ ವರ್ಷ ಶೇ.100 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ. 94.14 ರಷ್ಟು ಬಂದಿದೆ. ಐವರು ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ವಿನಯ್ 621 ಅಂಕ ಪಡೆದು ಕೀರ್ತಿ ತಂದಿದ್ದಾನೆ ಎಂದು ಪ್ರಶಂಸಿಸಿದರು.
ಸನ್ಮಾನ ಸ್ವೀಕರಿಸಿದ ಮಾತನಾಡಿದ ವಿನಯ್, ನನ್ನ ಈ ಸಾಧನೆಗೆ ಶಿಕ್ಷಕರೇ ಮುಖ್ಯ ಕಾರಣ. ಮಕ್ಕಳೊಂದಿಗೆ ಮಕ್ಕಳಂತೆ ಬೆರೆತು ನಮಗೆ ಅರ್ಥವಾಗುವಂತೆ ಶಿಕ್ಷಕರು ಪಾಠ ಮಾಡಿದ್ದಾರೆ. ಅಂತೆಯೇ ಪಾಲಕರು ಮನೆಯಲ್ಲಿ ಓದಿಗೆ ಅನುಕೂಲಕರ ವಾತಾವರಣ ನಿರ್ಮಿಸಿ ಕೊಡಬೇಕು ಎಂದರು.
ಎಸ್‌ಡಿಎಂ ಸಿ ಸದಸ್ಯ ನಂದೀಶ್, ಶಿಕ್ಷಕರಾದ ನಿಂಗೇಗೌಡ, ಮಹೇಶ್‌ಕುಮಾರ್, ವಿನಯ್ ಪಾಲಕರಾದ ಕುಮಾರ್ (ವೀರಪ್ಪ) ಸೇರಿದಂತೆ ಇತರರು ಇದ್ದರು.