

ಮೈಸೂರು: ಮೌಂಟ್ ಎವರೆಸ್ಟ್ ಶಿಖರವನ್ನೇರಿದ ಮೈಸೂರಿನ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಾದ ಪ್ರಾಧ್ಯಾಪಕಿ ಡಾ.ಉಷಾ ಹೆಗಡೆ ಅವರನ್ನು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಜೆಎಸ್‌ಎಸ್ ದಂತ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ನಗರದ ಬನ್ನಿಮಂಟಪದ ಜೆಎಸ್‌ಎಸ್ ಔಷಧ ಮಹಾವಿದ್ಯಾಲಯದ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದಾಖಲೆಗಳ ಪ್ರಕಾರ ವಿವಿಧ ರಾಷ್ಟ್ರಗಳಿಂದ ಮೌಂಟ್ ಎವರೆಸ್ಟ್ ಶಿಖರವನ್ನೆರಿದವರಲ್ಲಿ 6,664 ಪರ್ವತಾರೋಹಿಗಳಿದ್ದಾರೆ. ಇದರಲ್ಲಿ 544 ಮಂದಿ ಭಾರತೀಯರು. ಆ ಸಾಧನೆಯ ಪಟ್ಟಿಯಲ್ಲಿ ಡಾ.ಉಷಾ ಹೆಗಡೆ ಹೆಸರು ಇರುವುದು ಹೆಮ್ಮೆ ಸಂಗತಿ. ಈ ಕೀರ್ತಿ ಜೆಎಸ್‌ಎಸ್ ಸಂಸ್ಥೆಗೂ ಸಲ್ಲುತ್ತದೆ ಎಂದರು.
ಡಾ.ಉಷಾ ಅವರು ಏ.19ರಂದು ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತಲು ಆರಂಭಿಸಿ ಮೇ 19ರಂದು ಶಿಖರದ ತುತ್ತತುದಿಯನ್ನು ತಲುಪುವ ಮೂಲಕ ದಾಖಲೆ ಬರೆದಿದ್ದಾರಲ್ಲದೆ, ಜೆಎಸ್‌ಎಸ್ ಸಂಸ್ಥೆ ಹೆಸರಿನ ಧ್ವಜವನ್ನು ಆ ಪ್ರದೇಶದಲ್ಲಿ ಹಾರಿಸಿದ್ದಾರೆ. ಅವರ ಸಾಧನೆಯ ಜತೆಗೆ ಸಂಸ್ಥೆಯ ಕೀರ್ತಿಯನ್ನೂ ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಸುರಿಂದರ್ ಸಿಂಗ್ ಮಾತನಾಡಿ, ಸಾಧನೆ ಹಿಂದೆ ಪರಿಶ್ರಮ ಇರಬೇಕು. ಅದಕ್ಕೆ ಪ್ರತಿಫಲ ದೊರಕುತ್ತದೆ ಎಂಬುದಕ್ಕೆ ಡಾ.ಉಷಾ ಹೆಗಡೆ ಅವರೇ ಸಾಕ್ಷಿ. ಮೌಂಟ್ ಎವರೆಸ್ಟ್ ಶಿಖರವನ್ನೆರಲು ಹಲವು ದಿನಗಳ ತರಬೇತಿ ಬೇಕು ಹಾಗೂ ಕುಟುಂಬ ಸದಸ್ಯರ ಬೆಂಬಲ ಬೇಕು. ಈ ಸಾಧನೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಇವೆಲ್ಲವನ್ನು ಉಷಾ ಹೆಗಡೆ ಸಾಧನೆ ಮಾಡಿದ್ದಾರೆ ಎಂದರು.
ಜೆಎಸ್‌ಎಸ್ ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಎಂ.ಆರ್.ದಾಕ್ಷಾಯಣಿ ಮಾತನಾಡಿ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಠ, ಅದಕ್ಕಾಗಿ ನಡೆಸಿದ ತಯಾರಿಯಿಂದಾಗಿ ಡಾ.ಉಷಾ ಹೆಗಡೆ ಮೌಂಟ್ ಎವರೆಸ್ಟ್ ಶಿಖರವನ್ನೇರಿದ್ದಾರೆ. ತಮ್ಮ ಅನುಭವವನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಡಾ.ಉಷಾ ಹೆಗಡೆ ಮಾತನಾಡಿ, ಶಿಖರವನ್ನೆರುವಾಗ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಈ ವೇಳೆ ನಮ್ಮ ಕುಟುಂಬದವರು ಸ್ವಲ್ಪ ಆತಂಕಗೊಂಡಿದ್ದರು. ನಂತರ ತುತ್ತತುದಿ ಏರಿದ ಮೇಲೆ ನನ್ನ ಕುಟುಂಬದವರನ್ನು ಸಂಪರ್ಕಿಸಿ ವಿಷಯ ಮುಟ್ಟಿಸಿದೆ. ಈ ವೇಳೆ ನನ್ನಾಗದ ಆನಂದ ಹೇಳತೀರದು. ಅಲ್ಲದೆ, ಈ ಸಾಧನೆಯನ್ನು ನಮ್ಮ ಸಂಸ್ಥೆ ಗುರುತಿಸಿ, ಸನ್ಮಾನಿಸುತ್ತಿರುವುದು ಸಂತೋಷ ಸಂಗತಿ ಎಂದರು.
ಜೆಎಸ್‌ಎಸ್ ಮಹಾ ವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಸಚಿವ ಡಾ.ಬಿ.ಮಂಜುನಾಥ್, ಉಪಪ್ರಾಂಶುಪಾಲ ಡಾ.ಎಚ್.ಪಿ.ಜೈಶಂಕರ್, ವಿವಿಧ ವಿಭಾಗದ ಡಾ.ಬೃಂದಾ, ಡಾ.ಎಸ್.ಎಂ. ಅನುಶ್ರೀ, ಡಾ. ಕಾತ್ಯಾಯಿನಿ, ಡಾ.ಎಸ್.ಮಂಜುಳಾ, ಡಾ.ಜೆ.ಎನ್.ಹೆಗಡೆ, ಡಾ.ಸುಮನ್ ಬಸವರಾಜು ಇತರರು ಇದ್ದರು.