ಪಿಎಂ ಸ್ವ-ನಿಧಿ ಯೋಜನೆಯಡಿ ಬಿಬಿಎಂಪಿಗೆ ಪ್ರಶಸ್ತಿ

bbmp award
Published on

ಬೆಂಗಳೂರು: ಪಿಎಂ ಸ್ವನಿಧಿ ಯೋಜನೆ ಹಣಕಾಸು ಸೇರ್ಪಡೆ ಮತ್ತು ಬೀದಿ ವ್ಯಾಪಾರಿಗಳ ಸಬಲೀಕರಣ ಪ್ರವೇಶಕ್ಕಾಗಿ ಕಾರ್ಯಕ್ಷಮತೆ ಗುರುತಿಸುವಿಕೆಯಲ್ಲಿ (2023-24) ಬಿಬಿಎಂಪಿಯು ಮೆಗಾ ಹಾಗೂ ಮಿಲಿಯನ್ ಪ್ಲಸ್ ನಗರಗಳಡಿ 2ನೇ ಶ್ರೇಣಿ ಗಳಿಸುವುದರೊಂದಿಗೆ ಪ್ರಶಸ್ತಿಗೆ ಪಾತ್ರವಾಗಿದೆ.

ದೆಹಲಿಯ ಇಂಡಿಯಾ ಹ್ಯಾಬಿಟೇಟ್ ಸೆಂಟರ್‌ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ಲಾಲ್ ಅವರು ಪ್ರಶಸ್ತಿ ವಿತರಿಸಿದರು. ಬಿಬಿಎಂಪಿ ಪರವಾಗಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪುರಸ್ಕಾರ ಸ್ವೀಕರಿಸಿದರು.

ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ವತಿಯಿಂದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (ಪಿಎಂ ಸ್ವನಿಧಿ) ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರಡಿ ಬೀದಿ ಬದಿ ವ್ಯಾಪಾರಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ಕಿರು ಸಾಲಗಳನ್ನು ನೀಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ತೋಹಾನ್ ಸಾಹು, ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಪಿಎಂ ಸ್ವನಿಧಿಯ ಸಮುದಾಯ ಸಂಘಟಕ ಜನಾಧನಾಚಾರ್ ಹಾಜರಿದ್ದರು.

ಅನುಕೂಲ ಪಡೆದ ಬೀದಿ ವ್ಯಾಪಾರಿಗಳ ವಿವರ:

ಅರ್ಹ ಅರ್ಜಿಗಳ ಸಂಖ್ಯೆ: 2,04,173

ಮಂಜೂರಾದ ಅರ್ಜಿ ಸಂಖ್ಯೆ: 1,64,276

ಸಾಲ ಪಡೆದ ಫಲಾನುಭವಿಗಳು: 1,28,844

ಮಂಜೂರಾದ ಹಣ: 199.94 ಕೋಟಿ ರೂ.

ವಿತರಿಸಲಾದ ಹಣ: 184.36 ಕೋಟಿ ರೂ.

ಮೆಗಾ/ಮಿಲಿಯನ್ ಪ್ಲಸ್ ನಗರಗಳಡಿ ಪ್ರಶಸ್ತಿ ವಿವರ:

1ನೇ ಶ್ರೇಣಿ: ಮುನ್ಸಿಪಲ್ ಕಾರ್ಪೊರೇಷನ್, ದೆಹಲಿ

2ನೇ ಶ್ರೇಣಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ

3ನೇ ಶ್ರೇಣಿ: ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್, ಗುಜರಾತ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net