ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದಿಂದ ಸಾಧಕರಿಗೆ ಸನ್ಮಾನ

28
Published on

ಮೈಸೂರು: ಶಿಷ್ಯರು ಗುರುಗಳಿಗೆ ಸನ್ಮಾನ ಮಾಡುವುದು ಸಂಪ್ರದಾಯ. ಆದರೆ ತಮ್ಮ ಕಣ್ಣೆದುರಿಗೆ ಬೆಳೆದು ನಿಂತ ಮೂವರು ಶಿಷ್ಯರನ್ನು ಡಾ.ಕುಮಾರ್ ಅವರೇ ಪ್ರಶಸ್ತಿ ನೀಡಿ, ಗೌರವಿಸುತ್ತಿರುವುದು ಹೊಸ ಪರಂಪರೆಗೆ ನಾಂದಿ ಹಾಡಿದೆ ಎಂದು ಹಿರಿಯ ಸಂಗೀತ ವಿದ್ವಾಂಸ ನಂಜುಂಡಸ್ವಾಮಿ ಹೇಳಿದರು.

ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದಿಂದ ಮಂಚೇಗೌಡನ ಕೊಪ್ಪಲಿನ ಕಲೆಮನೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 45ನೇ ನಿರಂತರ ಕಲೆಮನೆ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮೈಸೂರು ನಗರ ನೃತ್ಯ ಸೇರಿದಂತೆ ವಿವಿಧ ಕಲೆಗಳಿಗೆ ತವರು. ಈ ಕಲಾ ಪರಂಪರೆಗಳು ಮುಂದುವರಿಯಲು ಎಲ್ಲರೂ ಉತ್ತೇಜನ ನೀಡಬೇಕು ಎಂದರು.

ಪ್ರಶಸ್ತಿ: ರಾಯಚೂರಿನ ಸಾಂಸ್ಕೃತಿಕ ಸಂಘಟಕ ಮಾರುತಿ ಬಡಿಗೇರ್, ಡಾ.ಕೆ. ಕುಮಾರ್ ಅವರ ಶಿಷ್ಯರೂ ಆದ ಮೆಸೂರು ರಾಮಾಮೃತ ಕಲಾಮಂಟಪದ ನಿರ್ದೇಶಕ ಆನಂದರಾಜೇ ಅರಸ್, ಭರತನಾಟ್ಯ ಕಲಾವಿದ ಎಸ್.ಎಂ. ಶರತ್, ಮೈಸೂರಿನ ಕಲಾನಿಧಿ ನೃತ್ಯಶಾಲೆಯ ನಿರ್ದೇಶಕಿ ಪದ್ಮಶೀ, ಮಂಡ್ಯದ ಶ್ರೀನಂದಿಕೇಶ್ವರ ಭರತನಾಟ್ಯ ಕಲಾಶಾಲೆಯ ನಿರ್ದೇಶಕಿ ಕೆ.ಎಸ್. ಶೆಲಾ ಅವರಿಗೆ ಕಲೆಮನೆ ಕಲಾಶ್ರೀ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸನ್ಮಾನಿತರ ಪರವಾಗಿ ಮಾರುತಿ ಬಡಿಗೇರ್ ಮಾತನಾಡಿದರು.

ಡಾ.ಕೆ. ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಈವರೆಗೆ ಸುಮಾರು 3 ಸಾವಿರ ಕಲಾವಿದರು ಕೇಂದ್ರದಲ್ಲಿ ಕಾರ್ಯಕ್ರಮ ನೀಡಿದ್ದಾರೆ ಎಂದರು. ಆಯೋಜಕರಾದ ಡಾ.ಜಿ. ಮಾಲತಿ, ಕೆ.ಎಂ. ಲೇಖಾ, ಕೆ.ಎಂ. ನಿಧಿ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಇದ್ದರು. ನಂತರ ಭರತನಾಟ್ಯ ಪ್ರದರ್ಶನ ಜನಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net