

ಹುಬ್ಬಳ್ಳಿ : ದ್ಯಾವಪ್ಪನವರ-ಕೊರವಿ-ಸಿದ್ನಾಳ ಎಜುಕೇಶನ್ ಟ್ರಸ್ಟ್ ಅನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಚೇತನ ಸಮೂಹ ಸಂಸ್ಥೆಗಳ ವತಿಯಿಂದ ‘ಶಿಕ್ಷಕ ವಿಕಾಸ ಪ್ರಶಸ್ತಿ-2025’ ಕಾರ್ಯಕ್ರಮದಲ್ಲಿ ಶ್ರೇಷ್ಟ ಶೈಕ್ಷಣಿಕ ಸೇವೆಗಾಗಿ 110 ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಅತಿಥಿಯಾಗಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಶಿಕ್ಷಕರು ಸಮಾಜ ರೂಪಿಸುವ ನಿಜವಾದ ಶಿಲ್ಪಿಗಳು. ಹೊಸ ತಲೆಮಾರನ್ನು ಶ್ರೇಷ್ಠ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಮತ್ತೊಬ್ಬ ಅತಿಥಿ ಡಾ. ಎ. ಎಚ್. ಚಚಡಿ ಮಾತನಾಡಿ, ಶಿಕ್ಷಕರು ಕೇವಲ ಪಾಠ ಮಾಡುವವರಲ್ಲ. ಅವರು ವಿದ್ಯಾರ್ಥಿಗಳ ಜೀವನಕ್ಕೆ ದಾರಿ ತೋರಿಸುವ ದೀಪಸ್ತಂಭಗಳು ಎಂದು ಹೇಳಿದರು.
ಡಾ. ಆನಂದ್ ಪಾಂಡುರಂಗಿ ಮಾತನಾಡಿ, ಇಂದಿನ ಶಿಕ್ಷಕರು ಕೇವಲ ಜ್ಞಾನವನ್ನು ನೀಡುವವರಲ್ಲ. ಅವರು ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಮಾನವೀಯತೆ ಬೆಳೆಸುವ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚೇತನ ಬಿಸಿನೆಸ್ ಸ್ಕೂಲ್ನ ನಿರ್ದೇಶಕ ಡಾ. ವಿಶ್ವನಾಥ ಕೊರವಿ ಮಾತನಾಡಿ, ಶಿಕ್ಷಕರ ಪರಿಶ್ರಮ, ತ್ಯಾಗ ಮತ್ತು ಶ್ರೇಷ್ಠ ಸೇವೆಯನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
ಸಂತೋಷ ಹಲಕುರಕಿ, ಮನೀಷ ಜೈನ್, ಅಥರ್ ಶೈಖ್, ನಾಗರಾಜ ಮಿರಜಕರ, ಜಗದೀಶ ದ್ಯಾವಪ್ಪನವರ, ಪ್ರಾಚಾರ್ಯ ಡಾ. ಅಶೋಕ ವಡಕಣ್ಣವರ, ಶೈಕ್ಷಣಿಕ ಸಲಹೆಗಾರ ಡಾ. ಕೆ. ಸಿ. ಪಾಂಗಿ, ಬಿಸಿಎ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಕುಲಕರ್ಣಿ (ಜಡಿಮಠ), ಡಾ. ನಿಧಿ ದೇಶಪಾಂಡೆ, ಪ್ರೊ. ಶರತ ರಾಯರ್, ಪ್ರೊ. ಗೌರಿ ಬುಲ್ಲಣ್ಣವರ, ಡಾ. ಭಾರತಿ ಬಡಿಗೇರ, ಪ್ರೊ. ವೀಣಾ, ಪ್ರೊ. ಶ್ವೇತಾ, ಮಹೇಶ ಸಂಗಮ, ಭಾಗ್ಯಶ್ರೀ ಬಳಿಗಾರ, ಡಾ. ಅನ್ನಪೂರ್ಣ ಟಿ. ಹಾಗೂ ಇತರರು ಇದ್ದರು.