

ಬೆಂಗಳೂರು: ಹಿರಿಯ ಕಾದಂಬರಿಕಾರ ಸಾ.ಕೃ.ಪ್ರಕಾಶ ಅವರ ಹೆಸರಲ್ಲಿ ಆರಂಭಿಸಿರುವ ಪ್ರಶಸ್ತಿಯನ್ನು ಖ್ಯಾತ ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು.
ಬಸವನಗುಡಿ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ಮಾತನಾಡಿದ ಬಾಬು ಕೃಷ್ಣಮೂರ್ತಿ, ಸಾ.ಕೃ.ಪ್ರಕಾಶ ಓರ್ವ ಉತ್ತಮ ಸಾಹಿತಿ, ಕಾದಂಬರಿಕಾರರು. ಅವರು ಕನ್ನಡಕ್ಕೆ ನೀಡಿರುವ ಅನೇಕ ಕೃತಿಗಳು ಅವರ ವ್ಯಕ್ತಿತ್ವವನ್ನು ವಿವರಿಸುತ್ತವೆ. ಅವರ ಹಲವಾರು ಕಾದಂಬರಿಗಳನ್ನು ಹಿಂದೆ ಮಂಗಳಾ ಪತ್ರಿಕೆಯ ಸಂಪಾದಕನಾಗಿದ್ದಾಗ ಪ್ರಕಟಿಸಿದ್ದೇನೆ. ಅಂತಹವರ ಹೆಸರಿನಲ್ಲಿ ಅವರ ಶಿಷ್ಯನೇ ಆಗಿರುವ ವಿಕ್ರಮ್ ಪ್ರಕಾಶನದ ಮೋದಾ ಹರಿಪ್ರಸಾದ್ ಸ್ಥಾಪಿಸಿರುವ ಪ್ರಶಸ್ತಿಯನ್ನು ಹಾಸ್ಯ ಸಾಹಿತ್ಯದಲ್ಲಿ ದಾಖಲೆಯನ್ನು ಸೃಷ್ಟಿಸಿರುವ ಎಂ.ಎಸ್.ನರಸಿಂಹಮೂರ್ತಿಯವರಿಗೆ ನೀಡಿರುವುದು ಅರ್ಥಪೂರ್ಣವಾಗಿದೆ.
ಎಂ.ಎಸ್.ನರಸಿಂಹಮೂರ್ತಿ ಅತ್ಯಂತ ಶಿಸ್ತು, ಸಮಯಪ್ರಜ್ಞೆಯನ್ನು ಇರಿಸಿಕೊಂಡಿರುವ ಅಪರೂಪದ ಬರಹಗಾರ ಮಂಗಳಾ, ಕರ್ಮವೀರ ನಿಯತಕಾಲಿಕೆಗಳಿಗೆ ಸುಮಾರು 30-40 ವರ್ಷ ನಿರಂತರವಾಗಿ ಅಂಕಣ ಬರೆದ ದಾಖಲೆ ನರಸಿಂಹಮೂರ್ತಿಯವರಿಗೆ ಸಲ್ಲುತ್ತದೆ. ಕಿರುತೆರೆ ಧಾರಾವಾಹಿಗಳಿಗಾಗಿ ಅವರು ಬರೆದ ಸಂಚಿಕೆಗಳಿಗೆ ಲೆಕ್ಕವಿಲ್ಲ. ಇಂತಹ ಗಣ್ಯರಿಗೆ ಪ್ರಶಸ್ತಿ ನೀಡಿದ್ದು ವಿಕ್ರಮ ಪ್ರಕಾಶನದ ಉತ್ತಮ ಕಾರ್ಯಗಳಲ್ಲಿ ಒಂದು ಎಂದರು.
ಸಮಾರಂಭದಲ್ಲಿ ತೆಲುಗು ಸಾಹಿತ್ಯದ ಧೃವತಾರೆ ಗುರುಜಾಡ ವೇಂಕಟ ಅಪ್ಪಾರಾವು ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಮೂಲ ತೆಲುಗು ಕೃತಿಯನ್ನು ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪ ಕನ್ನಡಕ್ಕೆ ಅನುವಾದಿಸಿದ್ದು, ವಿಕ್ರಮ ಪ್ರಕಾಶನ ಪ್ರಕಟಿಸಿದೆ.
ಕಾರ್ಯಕ್ರಮದಲ್ಲಿ ಗುರುಜಾಡರ ಸಂಬಂಧಿ ಡಾ.ಗೋಪಾಲಕೃಷ್ಣ, ನಟ ಶ್ರೀನಿವಾಸ ಪ್ರಭು, ಸಾಹಿತಿ ಅನಂತರಾಮ್, ಮೋದಾ ಹರಿಪ್ರಸಾದ ಮತ್ತಿತರರಿದ್ದರು.