

ಮೈಸೂರು: ಪ್ರತಿಯೊಬ್ಬರಿಗೂ ಮೂಲಾಧಾರವಾಗಿರುವ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳೆರಡರ ಸೇವೆ ತಾರತಮ್ಯವಿಲ್ಲದೆ ಸಮಾನವಾಗಿ ಯಾವ ದೇಶದಲ್ಲಿ ವ್ಯವಸ್ಥಿತವಾಗಿ ಎಲ್ಲರಿಗೂ ಸಿಗುತ್ತದೆಯೋ ಆ ದೇಶವು ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ದಿ ಹೊಂದುತ್ತದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನದಿಂದ ಅಗ್ರಹಾರದ ಅಕ್ಕನ ಬಳಗ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಕೊಡಗಿನ ಗೌರು ಪೊನ್ನವ್ವ ನಂಬಿಯಪಂಡ ಸ್ಮರಣಾರ್ಥ ಹಮ್ಮಿಕೊಂಡಿದ್ದ ‘ಜೀವನದಿ ಕಾವೇರಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ನಮ್ಮಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳೆರಡೂ ಬಹುಪಾಲು ಖಾಸಗಿಯವರ ವ್ಯಾಪಾರೀಕರಣದ ಕಪಿಮುಷ್ಟಿಯಲ್ಲಿ ಸಿಲುಕಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳು ಖಾಸಗಿಯವರೊಡನೆ ಪೈಪೋಟಿ ನೀಡಲಾಗದೆ ಮುಚ್ಚಿ ಹೋಗುವ ಸ್ಥಿತಿಯಲ್ಲಿದೆ. ಜನಸಾಮಾನ್ಯರಿಗೆ ಶಿಕ್ಷಣ ಮತ್ತು ಆರೋಗ್ಯ ಖಾಸಗಿಯವರಿಂದ ಕೈಗೆಟುಕದಂತಾಗಿರುವುದರಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳೆರ ಡನ್ನೂ ರಾಷ್ಟ್ರೀಕರಣಗೊಳಿಸಬೇಕು ಎಂದರು.
ಜಗತ್ತಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇರುವಷ್ಟು ಮಹತ್ವ ಬೇರೆ ಯಾವುದೇ ಕ್ಷೇತ್ರಗಳಿಗೂ ಇಲ್ಲ. ಶಿಕ್ಷಕ ವೃತ್ತಿಗಿರುವಷ್ಟು ಗೌರವ, ಘನತೆ, ನೆಲೆ, ಬೆಲೆ ಯಾವ ವೃತ್ತಿಗಳಿಗೂ ಇಲ್ಲ. ಎಲ್ಲ ಕ್ಷೇತ್ರಗಳ ನಿರ್ಮಾಣಕ್ಕೂ ಶಿಕ್ಷಕರೇ ಕಾರಣಕರ್ತರು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬೇರೆ ಯಾರಿಗೂ ಸಿಗದ ಮಹತ್ವದ ಸ್ಥಾನ ಗುರುಗಳಿಗೆ ದೊರೆತ್ತಿದೆ ಎಂದು ಹೇಳಿದರು.
ವಿಶೇಷವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರನ್ನು ಸಮಾಜ ಸದಾ ಸ್ಮರಿಸಬೇಕು. ಉನ್ನತ ಶಿಕ್ಷಣ ವ್ಯಾಸಂಗ ಮಾಡುವವರಿಗೆ ಪಾಠ ಮಾಡುವುದು ಸುಲಭ. ಆದರೆ ಪ್ರಾಥಮಿಕ ಶಿಕ್ಷಣ ಹಾಗಲ್ಲ. ಇಲ್ಲಿನ ಶಿಕ್ಷಕರಿಗೆ ಬಹಳ ತಾಳ್ಮೆ, ಸಹನೆ, ತುಂಬಾ ಶ್ರಮ ಇರಬೇಕಾಗುತ್ತದೆ. ಪಾಲಕರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡುವುದಷ್ಟೇ ಅವರ ಕೆಲಸ. ನಂತರ ಇಲ್ಲಿನ ಶಿಕ್ಷಕರು ಅವರಿಗೆ ಅಕ್ಷರ ಅಭ್ಯಾಸ ಮಾಡಿಸಿ ಖಾಲಿ ಮಡಕೆಗಳಂತಿದ್ದ ಅವರ ತಲೆಯಲ್ಲಿ ಅಕ್ಷರಜ್ಞಾನಾಮೃತವನ್ನು ತುಂಬಿ ಅವರನ್ನು ಸುಶಿಕ್ಷಿತರನ್ನಾಗಿಸುತ್ತಾರೆ. ಆದರೆ ಖಾಸಗಿ ಶಾಲೆಗಳು ಹಾಗಲ್ಲ. ಮಕ್ಕಳಿಗೆ ಹೋಂ ವರ್ಕ್ ಹೆಸರಿನಲ್ಲಿ ಬಹುಪಾಲು ಜವಾಬ್ದಾರಿಯನ್ನು ಮನೆಯವರ ಮೇಲೆ ಹೇರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಎಚ್.ಡಿ. ಕೋಟೆ ತಾಲೂಕಿನ ಆಲನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್.ಎನ್. ಜಾನಕಿ, ಹುಣಸೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಂ.ಪಿ. ಮಂಜುಳಾ, ಪಿರಿಯಾಪಟ್ಟಣ ತಾಲೂಕಿನ ಅರೇನಹಳ್ಳಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ. ಪರ್ವೀನ್ ತಾಜ್, ಮೈಸೂರು ತಾಲೂಕಿನ ಬೀರೇಗೌಡನಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಿ.ರತ್ನಾ, ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಂ.ಟಿ.ಅಕ್ಕಮ್ಮ, ಮೈಸೂರಿನ ಯಾದವಗಿರಿಯ ಭಾರತೀ ಸ್ತ್ರೀ ಸಮಾಜದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಂ.ರಾಣಿ, ತಿ.ನರಸೀಪುರ ತಾಲೂಕಿನ ವ್ಯಾಸರಾಜಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಟಿ.ಎಸ್.ಮೈಥಿಲಿ, ಸೋಮವಾರಪೇಟೆ ತಾಲೂಕಿನ ಕಾಜೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಎಂ. ಟಿ. ಸರಳಾ ಕುಮಾರಿ ಅವರಿಗೆ ‘ಜೀವನದಿ ಕಾವೇರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇದೇ ಸಂದರ್ಭ ಶಿಲ್ಪಿ ಎ. ಕಿರಣ್ ಸುಬ್ಬಯ್ಯ ಅವರಿಗೆ ‘ಕಾವೇರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ನೃತ್ಯ ಕಲಾವಿದೆ ಡಾ.ತುಳಸಿ ರಾಮಚಂದ್ರ, ನಿವೃತ್ತ ಶಿಕ್ಷಕ ಎ. ಸಂಗಪ್ಪ, ಕಲಾವಿದೆ ಡಾ. ಜಮುನಾರಾಣಿ ಮಿರ್ಲೆ, ಹಿರಣ್ಮಯಿ ಪ್ರತಿಷ್ಠಾನ ಅಧ್ಯಕ್ಷ ಎ. ಸಂಗಪ್ಪ, ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಮುರಳೀಧರ್, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ ಹಾಗೂ ಇತರರು ಇದ್ದರು.