

ಮೈಸೂರು: ಚಂಪಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನಿಂದ ವಿವಿಧ ಸಾಧಕರನ್ನು ಗುರುತಿಸಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಂಪಕ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎನ್.ಆರ್.ಸಮೂಹ ಸಂಸ್ಥೆ ಅಧ್ಯಕ್ಷ ಆರ್.ಗುರು ಅವರು ಸಾಧಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿ, ಸಾಧಕರ ಸಾಧನೆ, ಸಂಸ್ಥೆಯ ಕಾರ್ಯವನ್ನು ಪ್ರಶಂಸಿಸಿದರು. ವಿದ್ವಾನ್ ಡಾ.ಎಚ್.ವಿ.ನಾಗರಾಜ್ ರಾವ್(ವಿದ್ವಾಂಸರು), ಡಾ.ಕೆ.ಅನಂತ ರಾಮು(ಕನ್ನಡ ಲೇಖಕರು), ಡಾ.ಮಾಣಿಕ್ ಎ.ವಿ.ಬೆಂಗೇರಿ (ವಿದ್ವಾಂಸರು ಹಾಗೂ ಲೇಖಕರು) ಹಾಗೂ ವಿದುಷಿ ಬಿ.ಕೆ.ವಸಂತಲಕ್ಷ್ಮಿ(ಭರತನಾಟ್ಯ ಗುರುಗಳು) ಅವರಿಗೆ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಮಾಸಿಕ ಚಂಪಕ ರಾಷ್ಟ್ರೀಯ ಕಲಾ ಉತ್ಸವದ ಅಂಗವಾಗಿ ಪಾಲ್ಗುಣ ಮಾಸದ ಕಾರ್ಯಕ್ರಮ ನಡೆಯಿತು. ಚಂಪಕ ಅಕಾಡೆಮಿಯ ಸಂಸ್ಥಾಪಕಿ ವಿದುಷಿ ಡಾ.ನಾಗಲಕ್ಷ್ಮಿನಾಗರಾಜನ್ ಅವರು ಶ್ರೀಮದ್ ಶಂಕರ ದಿಗ್ವಿಜಯ - ದಿವ್ಯಾದ್ಭುತ ಬಾಲ್ಯಮ್ ಎಂಬ ವಿಷಯಾಧಾರಿತ ಕಾವ್ಯ ನಾಟಕ ಪ್ರಸ್ತುತಪಡಿಸಿದರು.
ಬೆಂಗಳೂರಿನ ವಿದುಷಿ ಬಿ.ಕೆ.ವಸಂತಲಕ್ಷ್ಮೀ ಅವರ ಶಿಷ್ಯಂದಿರು ಮಧುರಾಗಮನಂ ಎಂಬ ಕಿರು ನೃತ್ಯ ರೂಪಕ ಪ್ರಸ್ತುತಪಡಿಸಿ ಗುರುವಿಗೆ ವಂದನೆ ಸಲ್ಲಿಸಿದರು.