‘ವಿಜಯವಾಣಿ’, ‘ದಿಗ್ವಿಜಯ ನ್ಯೂಸ್’ ತಂಡಕ್ಕೆ ಪ್ರಶಸ್ತಿ

Award Winners
Published on

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ (2022-23) ವರದಿಗಾರಿಕೆ, ಲೇಖನ, ಪುಟವಿನ್ಯಾಸ, ಛಾಯಾಚಿತ್ರ ಹಾಗೂ ವಿದ್ಯುನ್ಮಾನ ವರದಿಗಳಿಗೆ ತನ್ನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಇದರಲ್ಲಿ ಐದು ಪ್ರಶಸ್ತಿಗಳು ‘ವಿಜಯವಾಣಿ’ ಹಾಗೂ ‘ದಿಗ್ವಿಜಯ ನ್ಯೂಸ್’ ತಂಡದ ಮುಡಿಗೇರಿವೆ.

ಶ್ರೀ ಜಿತೇಂದ್ರ ದಯಾಳಜಿ, ಮಜೇಥಿಯಾ ಅವರ ಹೆಸರಿನಲ್ಲಿ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ನೀಡುವ ಪ್ರಶಸ್ತಿಯನ್ನು ಕಲಘಟಗಿಯ ವಿಜಯವಾಣಿ ವರದಿಗಾರ ವೀರೇಶ ಹಾರೂಗೇರಿ, ಉಪ್ಪಿನ ಬೆಟಗೇರಿ ವಿಜಯವಾಣಿ ವರದಿಗಾರ ಶಿವಪ್ರಭು ಈಸರಗೊಂಡ ಅವರಿಗೆ, ಪುಟವಿನ್ಯಾಸಕ್ಕಾಗಿ ನೀಡಲಾಗುವ ಶ್ರೀಮತಿ ಲೀಲಾವತಿ ವಿಶ್ವನಾಥ ಶೆಟ್ಟಿ ಹೆಸರಿನ ಪ್ರಶಸ್ತಿಯನ್ನು ವಿಜಯವಾಣಿಯ ವಿಶ್ವನಾಥ ಹೊಸೂರು, ದಿ. ಕುಶಾಲ ಅಣ್ಣಪ್ಪ ಶೆಟ್ಟಿ ಅವರ ಹೆಸರಿನಲ್ಲಿ ನೀಡುವ ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿಯು ದಿಗ್ವಿಜಯ ನ್ಯೂಸ್ ವರದಿಗಾರ ಪ್ರಕಾಶ ಹಿರೇಮಠ ಹಾಗೂ ಕ್ಯಾಮರಾಮನ್ ವಿನಾಯಕ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.

ಅತ್ಯುತ್ತಮ ನಗರ ವರದಿಗೆ ಶ್ರೀಮತಿ ಕಮಲವ್ವ ಸೋಮಶೇಖರ ಬುರ್ಲಬುಡ್ಡಿ ಅವರ ಹೆಸರಿನ ಪ್ರಶಸ್ತಿಗೆ ಪ್ರಜಾವಾಣಿ ವರದಿಗಾರ ಮೊಹಮ್ಮದ ಶರೀಫ್, ಲಿಂ. ಮುರಿಗೆವ್ವ ಬಸಪ್ಪ ಹೂಗಾರ ಅವರ ಹೆಸರಿನ ಪ್ರಶಸ್ತಿಗೆ ವಿಜಯ ಕರ್ನಾಟಕ ವರದಿಗಾರ ಕಾಶಪ್ಪ ಕರದಿನ ಅವರು ಆಯ್ಕೆಗೊಂಡಿದ್ದಾರೆ.

ದಿ. ಸುಲೇಮಾನ ಅಬ್ದುಲ್ ಅಜೀಜ್​ಸಾಬ್ ಮುನವಳ್ಳಿ (ಪೊಲೀಸ್ ಇಲಾಖೆ) ಅವರ ಹೆಸರಿನಲ್ಲಿ ನೀಡುವ ಅತ್ಯುತ್ತಮ ಲೇಖನ ಪ್ರಶಸ್ತಿಗೆ ವಿಜಯ ಕರ್ನಾಟಕ ವರದಿಗಾರ ನಿಜಗುಣಿ ದಿಂಡಲಕೊಪ್ಪ ಹಾಗೂ ಕನ್ನಡಪ್ರಭದ ಛಾಯಾಗ್ರಾಹಕ ಈರಪ್ಪ ನಾಯ್ಕರ ಅವರಿಗೆ ಹಂಚಿಕೆ ಮಾಡಲಾಗಿದೆ.

ದಿ. ಕೃಷ್ಣಾಚಾರ್ಯ ರಾಘವಾಚಾರ್ಯ ಗಂಡಮಾಲಿ (ಮಾಮಾ) ಅವರ ಹೆಸರಿನಲ್ಲಿ ನೀಡುವ ಅತ್ಯುತ್ತಮ ಲೇಖನ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕದ ಅರುಣ ಹೆಗಡೆ, ಡಾ. ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನ ನೀಡುವ ಅತ್ಯುತ್ತಮ ಲೇಖನ ಪ್ರಶಸ್ತಿಗೆ ಕನ್ನಡಮ್ಮ ವರದಿಗಾರ ರವಿಕುಮಾರ ಕಗ್ಗಣ್ಣವರ ಅವರನ್ನು ಆಯ್ಕೆ ಮಾಡಲಾಗಿದೆ.

ದಿ. ರಾಮು ಶೆಟ್ಟಿ ಅವರ ಹೆಸರಿನಲ್ಲಿ ಅತ್ಯುತ್ತಮ ಆಂಗ್ಲಭಾಷಾ ವರದಿಗಾರಿಕೆ ನೀಡುವ ಪ್ರಶಸ್ತಿಯನ್ನು ಡೆಕ್ಕನ್ ಹೆರಾಲ್ಡ್​ನ ಪವನಕುಮಾರ ಎಚ್. ಹಾಗೂ ಮಂಜುನಾಥ ಹೆಗಡೆ ಅವರಿಗೆ ಹಂಚಿಕೆಯಾಗಿದೆ.

ಪುಟವಿನ್ಯಾಸಕ್ಕಾಗಿ ನೀಡಲಾಗುವ ಬಿ. ಎಫ್. ದಂಡಿನ ಅವರ ಹೆಸರಿನ ಪ್ರಶಸ್ತಿಯನ್ನು ಕನ್ನಡ ಪ್ರಭದ ವೆಂಕಟೇಶ ಲಾಳಗೆ, ದಿ. ಸಾಹಿತಿ ಎಂ.ಡಿ. ಗೋಗೇರಿ ಹೆಸರಿನಲ್ಲಿ ನೀಡಲಾಗುವ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕದ ಛಾಯಾಗ್ರಾಹಕ ರಾಮಚಂದ್ರ ಕುಲಕರ್ಣಿ ಹಾಗೂ ಲಕ್ಷ್ಮೀನಾರಾಯಣ ಉದಯೋನ್ಮುಖ ಪತ್ರಕರ್ತ ಪ್ರಶಸ್ತಿಯನ್ನು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿದ್ಯಾರ್ಥಿ ಶಿವರಾಜ ವಿಶ್ವನಾಥ ಅವರನ್ನು ಆಯ್ಕೆ ಮಾಡಲಾಗಿದೆ.

ಶ್ರೀ ವಸಂತ ಹೊರಟ್ಟಿ (ಆಕ್ಸಫರ್ಡ್ ಕಾಲೇಜ್) ಅವರು ನೀಡುವ ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿಯು ಟಿವಿ-5 ವರದಿಗಾರ ಯಲ್ಲಪ್ಪ ಸೋಲಾರಗೊಪ್ಪ ಹಾಗೂ ಕ್ಯಾಮರಾಮನ್ ಭರತ ಮಂಗಳಗಟ್ಟಿ ಅವರು ಆಯ್ಕೆಗೊಂಡಿದ್ದಾರೆ.

ಪ್ರಶಸ್ತಿ ಪ್ರದಾನ: ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆ. 13ರಂದು ಬೆಳಗ್ಗೆ 10ಗಂಟೆಗೆ ನಡೆಯಲಿರುವ ಸಂಘದ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ವಿುಕ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸುವರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಗಣಪತಿ ಗಂಗೊಳ್ಳಿ ಅವರು ಉಪಸ್ಥಿತರಿರುವರು. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net