

ಶಿರಸಿ: ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಹೆಸರಿನಲ್ಲಿ ನೀಡುವ ರಾಜ್ಯಮಟ್ಟದ ಪ್ರಶಸ್ತಿಯನ್ನು ಸಂಸ್ಕೃತ ವಿದ್ವಾಂಸ ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಶನಿವಾರ ಪ್ರದಾನ ಮಾಡಿದರು.
ಮುನ್ನೂರಕ್ಕೂ ಅಧಿಕ ಯಕ್ಷಗಾನ ಪ್ರಸಂಗ ಬರೆದು ನಾಡಿನ ಉದ್ದಗಲದಲ್ಲಿ ಯಕ್ಷಗಾನ ಶಿಷ್ಯರನ್ನು ತಯಾರು ಮಾಡಿದ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಅವರ ಹೆಸರಿನಲ್ಲಿ ಯಕ್ಷ ಶಾಲ್ಮಲಾ ಸಂಸ್ಥೆ ಪ್ರಸಕ್ತ ವರ್ಷದಿಂದ ವಾರ್ಷಿಕ ಪ್ರಶಸ್ತಿ ಘೊಷಿಸಿತ್ತು. ತಾಲೂಕಿನ ಮುಂಡಗೇಸರ ದೇವಾಲಯದಲ್ಲಿ ಆಯೋಜಿಸಿದ್ದ ಶ್ರೀ ರಾಮಾನುಭವ ತಾಳಮದ್ದಲೆ ಸಪ್ತಾಹದ ಸಮಾರೋಪದಲ್ಲಿ ಈ ಪ್ರಶಸ್ತಿಯನ್ನು ಶ್ರೀಗಳು ಕೆರೇಕೈ ದಂಪತಿಗೆ ಪ್ರದಾನ ಮಾಡಿದರು. ನಂತರ ಆಶೀರ್ವದಿಸಿದ ಶ್ರೀಗಳು, ತತ್ವಶಾಸ್ತ್ರದ ಸ್ಪರ್ಶ ರಾಮಾಯಣಕ್ಕಿದೆ. ಅದರಲ್ಲಿನ ತತ್ವವನ್ನು ಜೀವನದಲ್ಲಿ ಕಂಡುಕೊಳ್ಳಲು ನೀಡಿದ ರೂಪಕದಂತಿದೆ. ಇತಿಹಾಸವನ್ನು ಅನುಸರಿಸಿದ ಕಾವ್ಯ ಇದಾಗಿದ್ದು, ಜೀವನ ಮೌಲ್ಯಗಳ ಮಾರ್ವಿುಕತೆ ಒಳಗೊಂಡಿದೆ ಎಂದರು.
ಯಕ್ಷಗಾನ ಕನ್ನಡ ಭಾಷೆಯನ್ನು ದಿಕ್ಕುತಪ್ಪದಂತೆ ರಕ್ಷಿಸುತ್ತಿರುವ ಕಲೆಯಾಗಿದೆ. ಜತೆಗೆ ಶುದ್ಧತನ ಇರುವ ಕಲೆಯಾಗಿದೆ. ಸಂಸ್ಕೃತ ಮಾತೆಯ ಜತೆಗೆ ಕನ್ನಡ ಎಂಬ ವತ್ಸವು ಮೇಳೈಸಿದರೆ ಮಾತು, ಕಲೆ ಪ್ರೌಢಿಮೆಯೊಂದಿಗೆ ಕಂಗೊಳಿಸುತ್ತದೆ. ಹೀಗಾಗಿ ಕನ್ನಡ ಭಾಷೆ ಮಾಸುವ, ಇಂಗ್ಲಿಷ್ ಅತಿಯಾಗಿ ವ್ಯಾಮೋಹಿಸುವ ಮನೋಭಾವ ಕೈಬಿಡಬೇಕು ಎಂದರು. ಸಾಧನೆಯ ಪಥದಲ್ಲಿ ಮುನ್ನಡೆಯುತ್ತಿರುವ ಉಮಾಕಾಂತ ಭಟ್ಟರಿಗೆ ಹೊಸ್ತೋಟ ಪ್ರಶಸ್ತಿಯ ಜತೆಗೆ ಇನ್ನಷ್ಟು ಪ್ರಶಸ್ತಿಗಳು ಲಭಿಸುವಂತಾಗಲಿ ಎಂದು ಆಶಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉಮಾಕಾಂತ ಭಟ್ಟ , ಯಕ್ಷಗಾನದಿಂದ ಜೀವತೃಪ್ತಿ ನನಗೆ ಸಿಗುತ್ತಿತ್ತು. ಅದನ್ನು ಪರಿಗಣಿಸಿ ಹೊಸ್ತೋಟ ಪ್ರಶಸ್ತಿ ಕೊಟ್ಟಿದ್ದು ಸಾರ್ಥಕತೆ ನೀಡಿದೆ. ತಾಳಮದ್ದಲೆ ಸಪ್ತಾಹದಲ್ಲಿ ಎಲ್ಲ ದಿನ ಶ್ರೀರಾಮನ ಪಾತ್ರ ನಿರ್ವಹಣೆ ಸವಾಲಿನ ವಿಷಯವಾಗಿದೆ. ರಾವಣನಂತೆ ವರ್ತಿಸುವುದು ಸಾಧ್ಯವಾದರೂ ರಾಮನಂತೆ ವರ್ತಿಸುವುದು ತುಂಬ ಕಷ್ಟ. ಅವನಂತೆ ಬದುಕಲು, ಇರಲು ಶತಮಾನದ ಸಿದ್ಧತೆ ಬೇಕು ಎಂದರು. ಪ್ರೇಕ್ಷಕರಲ್ಲಿ ಪ್ರಾಮಾಣಿಕ ಪ್ರಶ್ನೆ ಮೂಡಿಸುವ ಕಾರ್ಯ ತಾಳಮದ್ದಲೆ ಅರ್ಥಧಾರಿಗಳಿಂದ ಆಗಬೇಕು, ಎಲ್ಲರೂ ರಾಮಾಯಣದ ಭಾವ, ಭಾಷೆ ಅನುಸರಿಸಿದರೆ ರಾಮನ ಅನುಭವ ಪಡೆಯಬಹುದು. ವಿಶ್ವವ್ಯಾಪಿಯಾಗಿ ರಾಮ ಶಿಕ್ಷಣ ಯೋಜನೆಗೆ ಇದು ನಾಂದಿಯಾಗಬೇಕು ಎಂದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ, ಕೆರೇಕೈ ಅವರ ಪತ್ನಿ ಸುನಂದ ಭಟ್ಟ ಅವರು ವೇದಿಕೆಯಲ್ಲಿ ಇದ್ದರು. ಯಕ್ಷ ಶಾಲ್ಮಲಾ ಸಂಘಟನೆ ಅಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ ಸ್ವಾಗತಿಸಿದರು. ಪ್ರೇಕ್ಷಕಿ ಪ್ರಜ್ಞಾ ಹೆಗಡೆ ಸಪ್ತಾಹದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಶಂಕರ ಭಟ್ಟ ಪ್ರಶಸ್ತಿ ಪತ್ರ ವಾಚಿಸಿದರು. ಸಂಘಟನೆ ಕಾರ್ಯದರ್ಶಿ ನಾಗರಾಜ ಜೋಶಿ ನಿರೂಪಿಸಿದರು. ನಂತರ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ರಾಮ ನಿರ್ಯಾಣ ಆಖ್ಯಾನ ಪ್ರದರ್ಶನಗೊಂಡಿತು.
ರಾಮಾಯಣವನ್ನು ಮನನ ಮಾಡುವ ಜತೆಗೆ ಬೇರೆಬೇರೆ ದೃಷ್ಟಿಕೋನದಲ್ಲಿ ಚಿಂತನೆ ಮಾಡಬೇಕು. ಆಗ ರಾಮನ ವ್ಯಕ್ತಿತ್ವ ಅರ್ಥವಾಗುವ ಜತೆಗೆ ಜೀವನದಲ್ಲಿ ಬದಲಾವಣೆ ಸಾಧ್ಯ. ಇಂಥ ರಾಮಾಯಣವನ್ನು ತಾಳಮದ್ದಲೆ, ಯಕ್ಷಗಾನಗಳ ಮೂಲಕ ಪ್ರಚುರಪಡಿಸಿ ಸಂಸ್ಕೃತಿಯ ಪುನರುಜ್ಜೀವನ ಮಾಡುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. | ಎಂ.ಎ. ಹೆಗಡೆ ದಂಟ್ಕಲ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ