

ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ 2024-25ನೇ ಶೈಕ್ಷಣಿಕ ವರ್ಷದ ರಾಷ್ಟ್ರಮಟ್ಟದ ಅತ್ಯುನ್ನತ ಗೌರವವಾದ ಎಜುಕೇಶನ್ ವರ್ಲ್ಡ್ ಇಂಡಿಯಾ ಸ್ಕೂಲ್ ರ್ಯಾಂಕಿಂಗ್ ಪ್ರಶಸ್ತಿಗೆ ಪಾತ್ರವಾಗಿದೆ.
ಇತ್ತೀಚೆಗೆ ನವದೆಹಲಿಯ ಗುರುಗ್ರಾಮ್ನ ಲೀಲಾ ಅಂಬಿಯೆನ್ಸ್ನಲ್ಲಿ ಶಾಲೆ ಸಂಯೋಜಕ ಶ್ರೀಮಧು ಕೆ.ಎಲ್.ಶಾಲೆ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ದೇಶದಲ್ಲಿಯೇ ಅತ್ಯುತ್ತಮ ಸಹಶಿಕ್ಷಣದ ಜತೆಗೆ ಶೈಕ್ಷಣಿಕ ಹಾಗೂ ಸಹಪಠ್ಯ ಕ್ಷೇತ್ರಗಳಲ್ಲಿ ಮಾಡಿರುವ ಅಪರೂಪದ ಸಾಧನೆ ಮತ್ತು ಸಮಗ್ರ ಶಿಕ್ಷಣ ಒದಗಿಸುವಲ್ಲಿ ಶಾಲೆ ತೋರಿರುವ ಕಾಳಜಿ ಹಾಗೂ ಡೇ ಸ್ಕೂಲ್ ವಿಭಾಗದಲ್ಲಿ ಉತ್ತಮ ಶ್ರೇಯಾಂಕ ಹೊಂದಿರುವ ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿ ಮೂರನೇ ಬಾರಿಗೆ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಪಡೆದುಕೊಳ್ಳುತ್ತಿರುವುದು ಗಮನಾರ್ಹ.
ಈ ಗೌರವ ನಮ್ಮ ಶಾಲೆ ಶೈಕ್ಷಣಿಕ ಸಾಧನೆಗಳು ಮತ್ತು ಸಹ-ಶಿಕ್ಷಣ ಚಟುವಟಿಕೆಗಳಿಗೆ ಸಂದ ಪ್ರಮುಖ ಪ್ರಶಸ್ತಿಯಾಗಿದೆ. ಆಡಳಿತ ಮಂಡಳಿ ಶೈಕ್ಷಣಿಕ ಕಾಳಜಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯ ಸಾಂಘಿಕ ಪರಿಶ್ರಮವೇ ಈ ಯಶಸ್ಸಿನ ಮೂಲ ಕಾರಣ. -ಶರಣಕುಮಾರ್, ಸಿದ್ದಿವಿನಾಯಕ ವಸತಿ ಶಾಲೆ ಪ್ರಾಂಶುಪಾಲ