

ಮಡಿಕೇರಿ:
ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ -2024ರ ಲಲಿತ ಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯವರು ಆಯೋಜಿಸಿದ್ದ ಸ್ಪರ್ಧೆ ಮತ್ತು ಪ್ರದರ್ಶನದ ವೃತ್ತಿಪರ ವಿಭಾಗದಲ್ಲಿ ಜಿಲ್ಲೆಯ ಮರಗೋಡು ಗ್ರಾಮದ ಕಲಾವಿದ ಐಮಂಡ ರೂಪೇಶ್ ನಾಣಯ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರ ಜಲವರ್ಣ ಕಲಾಕೃತಿ "ಡೆಕ್ಸ್ಟರಿಟಿ" ಪ್ರಶಸ್ತಿಗೆ ಭಾಜನವಾಗಿದೆ. 350ಕ್ಕೂ ಹೆಚ್ಚು ಕಲಾಕೃತಿಗಳು ಈ ಸ್ಪರ್ಧೆಯಲ್ಲಿದ್ದವು. ಈಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೂಪೇಶ್ ಪ್ರಶಸ್ತಿ ಸ್ವೀಕರಿಸಿದರು.
ಒಬ್ಬ ಕಲಾವಿದನ ಪ್ರಕಾರ ಕಲಾವಿದನಿಗೆ ಕಾಫಿ ಗಿಡದ ಚಿಗುರು ಕೆಲಸ ಮಾಡುವ ಮಹಿಳೆಯೇ ತನ್ನ ಕಲಾಕೃತಿಗೆ ಪ್ರೇರಣೆಯಾಗಬಹುದು. ಕಾಫಿ ಕೆಲಸದಲ್ಲಿ ನುರಿತ ಮಹಿಳೆಯ ಉಡುಪು, ತನ್ನ ಕೈಗಳನ್ನು ಬಳಸಿ ಸುಲಲಿತ ಕೆಲಸ ಮಾಡುವ ಚಿತ್ರಣ ಕಲಾವಿದನ ಕಣ್ಣಿಗೆ ಕಾವ್ಯಾತ್ಮಕವಾಗಿ ಪ್ರೇರಣೆಗೊಂಡು ಒಂದು ಕಲಾಕೃತಿಯ ರೂಪದಲ್ಲಿ ಹೊರಹೊಮ್ಮಬಹುದು ಎನ್ನುವುದನ್ನು ಈ ಕಲಾಕೃತಿ ತೋರಿಸಿಕೊಟ್ಟಿದೆ. ಈ ಹಿಂದೆಯೂ 1999ರ ದಸರಾ ಮಹೋತ್ಸವದ ಚಿತ್ರಕಲಾ ಸ್ಪರ್ಧಾ ವಿಭಾಗದಲ್ಲೂ ಇವರು ಪ್ರಶಸ್ತಿ ಗಳಿಸಿದ್ದರು. ರೂಪೇಶ್ ನಾಣಯ್ಯ ಮರಗೋಡು ಗ್ರಾಮದ ಐಮಂಡ ನಾಣಯ್ಯ ಮತ್ತು ದಿ. ಗೌರಮ್ಮ ಅವರ ಪುತ್ರ.