ರೈತರ ಹೋರಾಟ ಬದಲಾಗುವ ಸೂಚನೆ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಕೆ

08_12_Mdy_02(Award)
Published on

ಮಂಡ್ಯ: ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಶೀಘ್ರವಾಗಿ ಕ್ರಮ ವಹಿಸದಿದ್ದರೆ ರೈತರ ಹೋರಾಟದ ಹಾದಿ ಬದಲಾಗುವ ಸೂಚನೆ ಇದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜಿಸಿದ್ದ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ, ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, ಎಚ್.ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ರೈತರು ಕಬ್ಬು ಕೃಷಿಗೆ ವ್ಯಯ ಮಾಡುವ ಖರ್ಚು ಹಾಗೂ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ನೀಡುವ ಬೆಲೆಗೂ ಸಾಕಷ್ಟು ಅಂತರವಿದೆ. ಆದ್ದರಿಂದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಈ ವಿಚಾರವನ್ನು ಪ್ರಸ್ತಾಪಿಸಿ ಬೆಲೆಗಳ ಅಂತರ ಸರಿದೂಗಿಸುವ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಒಕ್ಕಲಿಗರ ಮೀಸಲಾತಿ ವಿಚಾರದಲ್ಲಿ ಪ್ರಾರಂಭದಿಂದಲೂ ನಮ್ಮ ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಮನಗಂಡು ಎಸ್.ಟಿ. ಸೋಮಶೇಖರ್ ಧ್ವನಿ ಎತ್ತಿ ಸರಿದೂಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರ ಬಗ್ಗೆ ಸದನದಲ್ಲಿ ಮತ್ತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸರಿಪಡಿಸಬೇಕು. ಇಲ್ಲದಿದ್ದರೆ ಒಕ್ಕಲಿಗರ ಕೂಗನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುಸ್ತಕಗಳು ಬಹಳ ಮುಖ್ಯ. ಕಳೆದು ಹೋಗಿರುವ ವಿಷಯಗಳು ಹಾಗು ಮಹನೀಯರ ಬಗ್ಗೆ ತಿಳಿದುಕೊಳ್ಳಬಹುದು. ಅಲ್ಲದೆ, ಮಕ್ಕಳಿಗೆ ಮಹನೀಯರ ತತ್ವ-ಆದರ್ಶಗಳ ಬಗ್ಗೆ ತಿಳಿಸಬಹುದು. ಆದರೆ, ನಾವು ಅಧಿಕಾರ ವಹಿಸಿಕೊಂಡ ಮಾತ್ರಕ್ಕೆ ಇದೆಲ್ಲವನ್ನೂ ಮರೆಯುತ್ತಿದ್ದೇವೆ. ಡಿ.ವಿ.ಜಿ ಅವರು ಬರೆದ ಕಗ್ಗದಂತೆ ಬದುಕಿದವರು ಇಂಡುವಾಳು ಎಚ್.ಹೊನ್ನಪ್ಪ ಅವರ ತಂದೆ ಎಚ್.ಹೊನ್ನಯ್ಯ ಅವರು. ಅವರು ನೇರವಾದಿಗಳಾಗಿದ್ದರು ಎಂದು ಸ್ಮರಿಸಿದರು.
ಪ್ರಶಸ್ತಿ ಪ್ರದಾನ ಮಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಬೆಂಗಳೂರಿನಲ್ಲಿ ಕಸ ಸ್ವಚ್ಛಗೊಳಿಸಲು ಸಾವಿರಾರು ಕೋಟಿ ರೂ ಖರ್ಚು ಮಾಡಲಾಗುತ್ತಿದೆ. ಆದರೆ, ಮೈಸೂರಿನ ಮುಡಾ ಮಾಜಿ ಅಧ್ಯಕ್ಷ ಮಾದೇಗೌಡ ಅವರು ಮೈಸೂರಿನ ಒಂದು ವಾರ್ಡ್‌ನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಕಸವನ್ನು ಸ್ವಚ್ಛಗೊಳಿಸಿ ನೈರ್ಮಲ್ಯವನ್ನು ಕಾಪಾಡುತ್ತಿದ್ದಾರೆ. ಇವರನ್ನು ನೋಡಿ ನಮ್ಮ ನಗರಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳನ್ನು ಕರೆಸಿ ತಿಳಿಸಿದ್ದೇನೆ ಎಂದರು.
ಮಾದೇಗೌಡರು ಮುಡಾ ಅಧ್ಯಕ್ಷರಾಗಿ ಬಹಳ ಒಳ್ಳೆಯ ಕೆಲಸ ಮಾಡಿದ್ದರು. ಆದರೆ, ನಂತರ ಬಂದ ಅಧ್ಯಕ್ಷರು ಅದನ್ನು ಸರಿಯಾಗಿ ತೆಗೆದುಕೊಂಡು ಹೋಗಲಿಲ್ಲ. ಕರೊನಾ ಸಂದರ್ಭದಲ್ಲಿ ವೈದ್ಯರು ಮತ್ತು ಶುಶ್ರೂಷಕಿಯರ ಪಾತ್ರ ಏನೆಂದು ಎಲ್ಲರಿಗೂ ಗೊತ್ತಾಗಿದೆ. ಈ ಸನ್ಮಾನಕ್ಕೆ ವೈದ್ಯೆ ತಾರಾ ಅವರು ಸೂಕ್ತ ವ್ಯಕ್ತಿ ಎಂದು ಬಣ್ಣಿಸಿದರು.
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಾಸಕ ಎಂ.ಶ್ರೀನಿವಾಸ್, ಎಂಎಲ್‌ಸಿ ಮಧು ಜಿ.ಮಾದೇಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಇತರರಿದ್ದರು.
ಇದೇ ಸಂದರ್ಭದಲ್ಲಿ ಜನದನಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕರ್ನಾಟಕ ಸಂಘದ ಸಹಯೋಗದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಅವರಿಗೆ ರಾಜ್ಯಮಟ್ಟದ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಹಾಗೂ ಶ್ರೀರಂಗಪಟ್ಟಣ ತಾಲೂಕು ಟಿ.ಎಂ.ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಟಿ.ಜೆ.ತಾರಾ ಅವರಿಗೆ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತೆಯೇ ನಾಲ್ವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net