

ಮಂಡ್ಯ: ಇನ್ನೊಬ್ಬರಿಗೆ ಪ್ರೇರಣೆಯಾಗುವಂತಹ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಲಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶಾಸಕ ಎಂ.ಶ್ರೀನಿವಾಸ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಜನ್ಮದಿನ ಆಚರಿಸಿಕೊಳ್ಳುವಾಗ ಎಲೆಮರೆಕಾಯಿಯಂತೆ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಿದವರನ್ನು ಅಭಿನಂದಿಸುವ ಮೂಲಕ ಉತ್ತಮ ಸಮಾಜಕ್ಕೆ ಪ್ರೇರಣೆಯಾಗಬೇಕೆಂದು ಸಲಹೆ ನೀಡಿದರು.
ಇತ್ತೀಚೆಗೆ ರಾಜಕಾರಣಿಗಳ ಜನ್ಮದಿನಗಳೆಂದರೆ ಅದೊಂದು ತೋರ್ಪಡಿಕೆಗೆ ಆಚರಿಸಿಕೊಳ್ಳುವ ಕಾರ್ಯಕ್ರಮಗಳಾಗಿ ಮಾರ್ಪಟ್ಟಿವೆ. ಆದರೆ ಜನನಾಯಕರಾದವರು ತಮ್ಮ ಹುಟ್ಟುಹಬ್ಬವನ್ನು ಹೇಗೆ ಮಾಡಬೇಕೆಂಬುದನ್ನು ಶಾಸಕ ಎಂ.ಶ್ರೀನಿವಾಸ್ ತೋರಿಸಿಕೊಟ್ಟಿದ್ದಾರೆ. ನನ್ನ 43 ವರ್ಷದ ರಾಜಕೀಯ ಜೀವನದಲ್ಲಿ ಅನೇಕ ರಾಜಕಾರಣಿಗಳ ಅನೇಕ ಕಾರ್ಯಕ್ರಮಗಳನ್ನು ನೋಡಿದ್ದೇನೆ. ಆದರೆ ಎಂ.ಶ್ರೀನಿವಾಸ್ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಇತರರಿಗೂ ನಾವೂ ಹೀಗೇ ಆಚರಿಸಿಕೊಳ್ಳಬೇಕೆಂಬ ಪ್ರೇರಣೆ ನೀಡಿದಂತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಮಾತನಾಡಿ, ಸಾಧಕರನ್ನು ಗುರುತಿಸದ ಸಮಾಜ ಕ್ರಿಯಾಶೀಲವಾಗಿರಲು ಸಾಧ್ಯವಿಲ್ಲ. ಆದ್ದರಿಂದ ಇಂದಿನ ಕಾರ್ಯಕ್ರಮದಲ್ಲಿ ಅನೇಕ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಆದರ್ಶ ಸಂಗತಿ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿದರು. ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ಶ್ರೀನಿವಾಸ್, ಮಾಜಿ ಶಾಸಕ ಬಿ.ರಾಮಕೃಷ್ಣ, ಪ್ರೊ.ಬಿ.ಜಯಪ್ರಕಾಶಗೌಡ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಎಚ್.ಎನ್.ಯೋಗೇಶ್, ಎಸ್.ಪಿ.ಗೌರೀಶ್, ಮಹದೇವು, ಬಿ.ಕುಮಾರ್, ಡಿ.ಶಿವರಾಜು ಕೀಲಾರ, ಕೆ.ಎಂ.ಕೃಷ್ಣೇಗೌಡ ಇತರರಿದ್ದರು.
ಇದೇ ವೇಳೆ ನಾಡೋಜ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಎಂ.ಶ್ರೀನಿವಾಸ್ ಸಮಾಜಸೇವಾ ಪ್ರಶಸ್ತಿ, ಪ್ರಗತಿಪರ ರೈತ ವಿಕಾಸ್‌ಗೆ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ, ನರರೋಗ ತಜ್ಞ ಡಾ.ನವೀನ್ ಅಪ್ಪಾಜಿಗೌಡ ಅವರಿಗೆ ಎಂ.ಶ್ರೀನಿವಾಸ್ ವಿಶೇಷ ಪುರಸ್ಕಾರ ಹಾಗೂ ಶಿಕ್ಷಕ ಚಂದಗಾಲು ಲೋಕೇಶ್, ಜಾನಪದ ಸಾಹಿತಿ ಡಾ.ಎಂ.ಕೆಂಪಮ್ಮ ಕಾರ್ಕಹಳ್ಳಿ, ಲೇಖಕ ಡಾ.ಎಸ್.ಶಿವರಾಜು, ಬಾಸ್ಕೆಟ್‌ಬಾಲ್ ಕ್ರೀಡಾಪಟು ಅರವಿಂದ್, ಸಂಗೀತ ಕಲಾವಿದ ಶಶಾಂಕ್ ಕೀಲಾರ ಅವರಿಗೆ ಎಂ.ಶ್ರೀನಿವಾಸ್ ಪುರಸ್ಕಾರ ನೀಡಿ ಗೌರವಿಸಲಾಯಿತು.