ಮೂವರಿಗೆ ಡಾ.ಎಚ್.ಡಿ.ಚೌಡಯ್ಯ ಪ್ರಶಸ್ತಿ ಪ್ರದಾನ: ನಗರದ ಪಿಇಎಸ್ ಕಾಲೇಜಿನಲ್ಲಿ ಕಾರ್ಯಕ್ರಮ

28_09_Mdy_02(Prasasthi Pradana)
Published on

ಮಂಡ್ಯ: ನಗರದ ಪಿಇಎಸ್ ಕಾಲೇಜಿನ ಕೆವಿಎಸ್ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಮೂವರಿಗೆ ಡಾ.ಎಚ್.ಡಿ.ಚೌಡಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರಿಗೆ ಸಹಕಾರ ಪ್ರಶಸ್ತಿ, ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅವರಿಗೆ ಸಮಾಜ ಸೇವಾ ಪ್ರಶಸ್ತಿ ಮತ್ತು ಗೊರವನಹಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮೀಣಾಭಿವೃದ್ಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೊರವನಹಳ್ಳಿ ಗ್ರಾಪಂ ಅಧ್ಯಕ್ಷ ಜಿ.ಬಿ.ಶಂಕರೇಗೌಡ ಪ್ರಶಸ್ತಿ ಸ್ವೀಕರಿಸಿದರು. ಮೂವರಿಗೂ ತಲಾ 20 ಸಾವಿರ ರೂ. ನಗದು ನೀಡಲಾಯಿತು.

ಅಂತೆಯೇ ಹೊಳಲು ಸರ್ಕಾರಿ ಪ್ರೌಢಶಾಲೆಯ ಎಚ್.ಕೆ.ವಿಸ್ಮಯಾ, ಎಚ್.ಕೆ. ಸತ್ಯಮೂರ್ತಿ, ಸಿ.ಎಸ್.ಭುವನ್‌ಗೌಡ ಹಾಗೂ ಶಿವಳ್ಳಿಯ ವೆಂಕಟೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯ ಎಸ್.ದಿಶಾ ಅವರಿಗೆ ತಲಾ 2 ಸಾವಿರ ರೂ.ನಂತೆ ಪ್ರತಿಭಾ ವಿದ್ಯಾರ್ಥಿ ಪುರಸ್ಕಾರ ನೀಡಲಾಯಿತು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಸಹಕಾರ ಕ್ಷೇತ್ರದಿಂದ ಜನಸಾಮಾನ್ಯರು ಆರ್ಥಿಕವಾಗಿ ಬದುಕು ಕಟ್ಟಿಕೊಳ್ಳಬೇಕು, ಸರ್ಕಾರಕ್ಕೆ ಸಮನಾಂತರವಾದ ವ್ಯವಸ್ಥೆ ರೂಪುಗೊಳ್ಳಬೇಕು ಎಂಬ ಆಶಯದೊಂದಿಗೆ ಸಹಕಾರ ಚಳವಳಿ ಪ್ರಾರಂಭವಾಯಿತು. ಬ್ಯಾಂಕಿಂಗ್ ಕ್ಷೇತ್ರದಲ್ಲೂ ಸಹಕಾರ ತತ್ವವನ್ನು ಅಳವಡಿಸುವ ಮೂಲಕ ಇಂದಿಗೂ ದಕ್ಷಿಣ ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲೂ ಲಾಭದಾಯಕವಾಗಿ ನಡೆಯುತ್ತಿವೆ ಎಂದು ಶ್ಲಾಘಿಸಿದರು.

ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಧರ್ಮದರ್ಶಿ ಎಚ್.ಸಿ. ಮೋಹನ್‌ಕುಮಾರ್, ಡಾ.ರಾಮಲಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net