

ಮಂಡ್ಯ: ಪಶುವೈದ್ಯರಾಗಿ ಗ್ರಾಮೀಣ ರೈತರ ನೆರವಿಗೆ ನಿಂತ ಡಾ.ಜಯರಾಂ ಅವರು ಸಂಪಾದಿಸಿರುವ ಜನಮನ್ನಣೆಯೇ ಅವರ ವ್ಯಕ್ತಿತ್ವಕ್ಕೆ ನಿದರ್ಶನ ಎಂದು ಮಿಮ್ಸ್‌ನ ನಿವೃತ್ತ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್ ಬಣ್ಣಿಸಿದರು.
ನಗರದ ಗಾಂಧಿಭವನದಲ್ಲಿ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಡಾ.ವಿ.ಟಿ.ಸುಶೀಲ ಜಯರಾಂ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಶತಾಯುಷಿ ಸಾಹಿತಿ ದಿ.ಸೀತಾಸುತ ಅವರ 124ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಡಾ.ವಿ.ಟಿ.ಸುಶೀಲಾ ಜಯರಾಂ ವೈದ್ಯಕೀಯ ಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಡಾ.ಜಯರಾಂ ಅವರು ಸಮಾಜಸೇವೆಗೆ ತೊಡಗಿಸಿಕೊಂಡ ಮಂಡ್ಯ ಜಿಲ್ಲಾಸ್ಪತ್ರೆಗೆ ಸುಮಾರು 1.5 ಕೋಟಿ ರೂ ವೆಚ್ಚ ಮಾಡಿ ಡಯಾಲಿಸಿಸ್ ಘಟಕವನ್ನು ನಿರ್ಮಿಸಿಕೊಟ್ಟಿದ್ದಾರೆ. ಆ ನಿರ್ಮಾಣ ಕಾರ್ಯದಲ್ಲಿ ತಾವೂ ತೊಡಗಿಸಿಕೊಂಡು ಶ್ರಮಿಸುತ್ತಿದ್ದರು. ಅದಾದ ಕೆಲವೇ ವರ್ಷಗಳಲ್ಲಿ ಮತ್ತೊಮ್ಮೆ ಬೇಡಿಕೆ ಇಟ್ಟೆವು. ಅದಕ್ಕೂ ಬೇಸರಿಸದೆ, ಆಯಿತು ಟ್ರಸ್ಟ್‌ನಲ್ಲಿರುವ ನಮ್ಮ ಕುಟುಂಬದವರೊಟ್ಟಿಗೆ ಚರ್ಚಿಸಿ ಕಾರ್ಯಗತಗೊಳಿಸೋಣ ಎಂದು ಭರವಸೆ ನೀಡಿದ್ದರು. ಅದರಂತೆಯೇ ನಡೆದುಕೊಂಡ ಅವರ ಕುಟುಂಬ 40 ಹಾಸಿಗೆ ಸಾಮರ್ಥ್ಯದ ಗರ್ಭಿಣಿಯರ ವಾರ್ಡ್ ಕಟ್ಟಿಸಿಕೊಟ್ಟು ನೊಂದವರಿಗೆ ಆಸರೆಯಾಗುವ ಕೆಲಸ ಮಾಡುತ್ತಾ ಬಂದಿದ್ದಾರೆ. ಒಟ್ಟಾರೆ ಈ ಟ್ರಸ್ಟ್‌ನಿಂದ ಆಸ್ಪತ್ರೆಗೆ ಮೂರೂವರೆಯಿಂದ ನಾಲ್ಕು ಕೋಟಿ ರೂ ಮೌಲ್ಯದ ಸೇವೆ ಸಂದಿದೆ. ಈ ಕೊಡುಗೆಗೆ ಬೆಲೆಕಟ್ಟಲಾಗದು ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ದೊರೆಸ್ವಾಮಿ ಅಧ್ಯಕ್ಷತೆ ವಹಿಸಿ, ತಮ್ಮ ತಂದೆಯವರ ಜೀವನ ಸಾಧನೆ ಕುರಿತು ಮಾತನಾಡಿದರು. ಡಾ.ಜಯರಾಂ, ಡಾ.ಕೆ.ಜೆ.ದಿನೇಶ್, ಡಾ.ಸಿ.ಉಷಾರಾಣಿ, ಕೆ.ಜೆ.ಕೌಶಿಕ್, ಎನ್.ಶಿಲ್ಪಾ ಇತರರಿದ್ದರು.
ಇದೇ ವೇಳೆ ಸೋಮವಾರಪೇಟೆಯ ವೀರಸೈನಿಕ ಎ.ಪಿ.ಪ್ರಶಾಂತ್ ಅವರಿಗೆ ಮರಣೋತ್ತರವಾಗಿ ದೇಶಸೇವಾ ಪ್ರಶಸ್ತಿ ನೀಡಲಾಯಿತು. ಅವರ ತಂದೆ ಪೊನ್ನಪ್ಪ ಪ್ರಶಸ್ತಿ ಸ್ವೀಕರಿಸಿದರು. ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಎಂ.ಬಿ.ಸುರೇಶ್ ಅವರಿಗೆ ಸಾಹಿತ್ಯ ಸೇವಾ ಪ್ರಶಸ್ತಿ ನೀಡಲಾಯಿತು. ಮೂವರಿಗೆ ತಲಾ 20 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಎಂ.ರಾಮಕೃಷ್ಣ ಅವರಿಗೆ ವಿಶೇಷ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.