

ರಾಯಚೂರು ಪ್ರಸ್ತುತ ದಿನಗಳಲ್ಲಿ ರಾಜ್ಯದಲ್ಲಿಯೇ ಕನ್ನಡವನ್ನು ಉಳಿಸಲು ಹೋರಾಟಗಳು ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತದ ಸಂಗತಿಯಾಗಿದೆಂದು ಹಿರಿಯ ಪತ್ರಕರ್ತ ಎನ್.ನಾಗರಾಜ ಹೇಳಿದರು.
ನಗರದ ಕನ್ನಡ ಭವನದಲ್ಲಿ ಹೊಸಮನಿ ಪ್ರಕಾಶನ ವತಿಯಿಂದ ಹೊಸಮನಿ ಮಹಿಳಾ ಕಾವ್ಯ ಪ್ರಶಸ್ತಿ, ಹಾಗೂ ಹೊಸಮನಿ ರಂಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣದ ವಿಪರೀತ ಬಳಕೆಯಿಂದಾಗಿ, ಕನ್ನಡ ಭಾಷೆಯ ಓದುಗರು, ಬರಹಗಾರರು, ಸಾಹಿತಿಗಳು ಸಾಹಿತ್ಯಾಸಕ್ತರು ತೀರ ಕಡಿಮೆಯಾಗಿದ್ದು, ಪ್ರತಿಯೊಬ್ಬರೂ ಕನ್ನಡ ಭಷೆಯ ಅಸ್ಮಿತೆಯನ್ನು ಗಟ್ಟಿಗೊಳಿಸಲು ಮುಂದಾಗಬೇಕು.
ಸಾಧಕರಿಗೆ ಪ್ರಶಸ್ತಿ ನೀಡುವುದರಿಂದ ಅವರ ಜವಾಬ್ದಾರಿ ಹೆಚ್ಚಾಗುತ್ತದೆ. ಅದರಂತೆ ಕನ್ನಡ ಸಾಹಿತಿಗಳು ಹಾಗೂ ಕಲಾವಿದರಿಗೆ ಪ್ರಶಸ್ತಿಯನ್ನು ನೀಡುವುದರಿಂದ ಕನ್ನಡವನ್ನು ಉಳಿಸುವ ಜವಾಬ್ದಾರಿ ಹೆಚ್ಚಾಗುತ್ತದೆ. ಕನ್ನಡವನ್ನು ಉಳಿಸಲು ಕನ್ನಡ ಭಾಷೆ ಯನ್ನು ಪ್ರತಿಯೊಬ್ಬರು ಪ್ರೀತಿಸಬೇಕು. ಜತೆಗೆ ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸಲು ಮುಂದಾಗಬೇಕು ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ ಮಾತನಾಡಿ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನಿಸುತ್ತಿರುವುದು ಅವರಿಗೆ ಜೀವ ತುಂಬುವ ಕೆಲಸವಾಗಿದೆ. ಹೊಸಮನಿ ಪ್ರಕಾಶನದ ಈ ಕಾರ್ಯ ಶ್ಲಾಘನೀಯವಾದದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದರು.
ಈ ಸಂದರ್ಭದಲ್ಲಿ ಪ್ರಕಾಶನದ ಅಧ್ಯಕ್ಷ ಬಶೀರ ಅಹ್ಮದ್ ಹೊಸಮನಿ, ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯ ಮಾಜಿ ಸಂಘಟನಾ ಕಾರ್ಯದರ್ಶಿ ರುದ್ರಯ್ಯ ಗುಣಾರಿ, ರಾಜಕುಮಾರ ಅಭಿಮಾನಿಗಳ ಸಂಘದ ಮಾಜಿ ಅಧ್ಯಕ್ಷ ಕೆ.ವೀರೇಶ, ರಮೇಶ ದೊಡ್ಡಮನಿ, ಚಂದ್ರಶೇಖರ ಪಾಟೀಲ್, ಪರ್ವಿನ್ ಬೇಗಂ, ಖುಷಿ ಹೊಸಮನಿ ಸೇರಿದಂತೆ ಅನೇಕರು ಇದ್ದರು.