

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ನೀಡುವ ಪ್ರಸಕ್ತ ಸಾಲಿನ ರಂಗಚಂದ್ರ ಪ್ರಶಸ್ತಿಗೆ ಅಡಿಗೋಣದ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಭಾಗವತ ಬೀರಣ್ಣ ಮಾಸ್ತರ ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಸೆ.30ರಂದು ಬೆಳಗ್ಗೆ 9.30ಕ್ಕೆ ಗೋಕರ್ಣದ ಭದ್ರಕಾಳಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ.ಎಚ್. ನಾಯಕ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಕೆನರಾ ಶಿಕ್ಷಣ ಪ್ರಸಾರಕ ಮಂಡಳಿ ಅಧ್ಯಕ್ಷ ವಿನಾಯಕ ಮಲ್ಲನ್ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಪ್ರಶಸ್ತಿ ಪ್ರದಾನ ಮಾಡುವರು. ನಿವೃತ್ತ ಪ್ರಾಚಾರ್ಯ ಎನ್.ಆರ್. ನಾಯಕ, ಬೆಳಗಾವಿ ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಭದ್ರಕಾಳಿ ಕಾಲೇಜಿನ ಪ್ರಾಚಾರ್ಯ ಎಸ್.ಸಿ. ನಾಯಕ ಪಾಲ್ಗೊಳ್ಳಲಿದ್ದಾರೆ ಎಂದರು.
ಮಾರ್ತಾಂಡಪ್ಪ ಕತ್ತಿ ಮಾತನಾಡಿ, 6ವರ್ಷಗಳಿಂದ ರಂಗಕರ್ಮಿ ದಿ. ಕೆ.ಜಗುಚಂದ್ರ ಸ್ಮರಣಾರ್ಥ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ಜತೆಗೆ ಜಾನಪದ ಕಲೆ, ಸಾಹಿತ್ಯಾವಲೋಕನ ಸಹ ಏರ್ಪಡಿಸಲಾಗಿದೆ.
ಪ್ರತಿಷ್ಠಾನದ ಎಂ.ಎಸ್. ಫರಾಸ್, ಪ್ರೇಮಾನಂದ ಶಿಂಧೆ, ಸುರೇಶ ಬೆಟಗೇರಿ, ಇತರರು ಇದ್ದರು.