ದೇವರಿಗೆ ಹತ್ತಿರವಿರುವ ಕಲಾವಿದರು: ಕೇಂದ್ರ ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಷಿ ಅಭಿಮತ

Award Presentation
Published on

ಮಂಡ್ಯ: ಆಧ್ಯಾತ್ಮಿಕ ಭಾವನೆ ಹೊಂದಿರುವ ಕಲಾವಿದರು ದೇವರಿಗೆ ಹತ್ತಿರವಾಗಿರುತ್ತಾರೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ‘ಎಂ.ರವಿಪ್ರಸಾದ್ ರಾಜ್ಯಮಟ್ಟದ ರಂಗಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ರಂಗಭೂಮಿ ಕ್ಷೇತ್ರದಲ್ಲಿ ರವಿಪ್ರಸಾದ್ ಅವರು ಅಭೂತಪೂರ್ವ ಅಭಿನಯ ಮಾಡಿದ ಹೆಗ್ಗಳಿಕೆ ಹೊಂದಿದ್ದರು. ಆಯಾ ಕಾಲಘಟ್ಟದಲ್ಲಿ ಅದರದೇ ಶೈಲಿಯಲ್ಲಿ ಪಾತ್ರಕ್ಕೆ ಜೀವ ತುಂಬುತ್ತಿದ್ದರು ಎಂದು ಸ್ಮರಿಸಿದರು.

ಜೀವನ ಎನ್ನುವುದು ಕ್ಷಣಿಕವಾಗಿದೆ. ಅದರಂತೆ ರವಿಪ್ರಸಾದ್ ಅವರು ಕಿರುತೆರೆ ಹಾಗೂ ಬೆಳ್ಳಿ ಪರದೆಯಲ್ಲಿ ಮಿಂಚಿ ಮರೆಯಾಗಿದ್ದಾರೆ. ಅವರ ತಂದೆ ಡಾ.ಎಚ್.ಎಸ್.ಮುದ್ದೇಗೌಡರು ನನ್ನ ಜತೆಗಾರರು. ಮಗನ ಸಾವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಆಶಿಸಿದರು.

ಶಾಸಕ ರವಿಕುಮಾರ್ ಗಣಿಗ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ವಿಚಾರವಾದಿ ಡಾ.ಎಚ್.ಎಸ್.ಮುದ್ದೇಗೌಡ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಲಯನ್ಸ್ ಸಂಸ್ಥೆಯ ಜಿ.ಎ.ರಮೇಶ್, ಲೋಕೇಶ್ ಚಂದಗಾಲು ಇತರರಿದ್ದರು.

ಇದೇ ಸಂದರ್ಭದಲ್ಲಿ ರಂಗಭೂಮಿ ಕಲಾವಿದ ಚಿಕ್ಕೇಗೌಡನದೊಡ್ಡಿ ಸಿ.ಶಿವರಾಮು ಅವರಿಗೆ 10 ಸಾವಿರ ರೂ ನಗದಿನ ಜತೆಗೆ ಎಂ.ರವಿಪ್ರಸಾದ್ ರಂಗಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net