

ನವದೆಹಲಿ: ಭಾರತ್ ಹೆವಿ ಎಲೆಕ್ಟ್ರಿಕಲ್ (ಬಿಎಚ್‌ಇಎಲ್) ಕಂಪನಿಯ ಅಭಿವೃಧಿಗೆ ಕೊಡುಗೆ ನೀಡಿರುವ ಸಿಬ್ಬಂದಿಗೆ ‘ಉತ್ಕೃಷ್ಟತಾ ಪುರಸ್ಕಾರ’ (ಶ್ರೇಷ್ಠತಾ ಪುರಸ್ಕಾರ)(Award of Excellence to BHEL, Bangalore) ಸೇರಿ ವಿವಿಧ ಪುರಸ್ಕಾರಗಳನ್ನು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರದಾನ ಮಾಡಿದರು.
ನವದೆಹಲಿಯ ನೋಯಿಡಾದಲ್ಲಿರುವ ಬಿಎಚ್‌ಇಎಲ್ ಟೌನ್ ಶಿಪ್‌ನಲ್ಲಿ ನಡೆದ ಬಿಎಚ್‌ಇಎಲ್ ಡೇ ಹಾಗೂ ಉತ್ಕೃಷ್ಟತಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ದೇಶದ ವಿವಿಧ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಘಟಕಗಳ ಉತ್ತಮ ಸಾಧನೆಯನ್ನು ಗುರುತಿಸಿ ಗೌರವಿಸಿದರು.
2019-20ನೇ ಸಾಲಿನ ಉತ್ಕೃಷ್ಟತಾ ಪುರಸ್ಕಾರಕ್ಕೆ ಪಾತ್ರವಾಗಿರುವ ಬೆಂಗಳೂರಿನ ಬಿಎಚ್‌ಇಎಲ್ ಎಲೆಕ್ಟ್ರಾನಿಕ್ ವಿಭಾಗದ ಮುಕೇಶ್ ಕುಮಾರ್, 2020-21ನೇ ಸಾಲಿನ ಉತ್ಕೃಷ್ಟತಾ ಪುರಸ್ಕಾರಕ್ಕೆ ಪಾತ್ರರಾಗಿರುವ ಬೆಂಗಳೂರು ಘಟಕದ ತೌಸ್ಿ ಅವರಿಗೆ ಪುರಸ್ಕಾರ ಪ್ರದಾನ ಮಾಡಿದರು.
ಅಲ್ಲದೆ, 2021-22ನೇ ಸಾಲಿನ ಪ್ರತಿಬದ್ಧತಾ ಪುರಸ್ಕಾರಕ್ಕೆ ಪಾತ್ರರಾಗಿರುವ ಬೆಂಗಳೂರಿನ ಬಿಎಚ್‌ಇಎಲ್ ಎಲೆಕ್ಟ್ರಾನಿಕ್ ವಿಭಾಗದ ರಾಖಿ ಎಲ್. ಮೋಹನ್ ಅವರಿಗೆ 2022-23ನೇ ಸಾಲಿನ ಅನುಸಂಧಾನ ಪುರಸ್ಕಾರಕ್ಕೆ ಪಾತ್ರವಾಗಿರುವ ಬೆಂಗಳೂರಿನ ಬಿಎಚ್‌ಇಎಲ್ ಎಲೆಕ್ಟ್ರಾನಿಕ್ ವಿಭಾಗದ ಧ್ಯಾನ್ ಜ್ಯೋತಿ ಸೈಕಿಯಾ ಹಾಗೂ 2023-24ನೇ ಸಾಲಿನಲ್ಲಿ ಉತ್ಪಾದಕ ಪುರಸ್ಕಾರಕ್ಕೆ ಪಾತ್ರರಾಗಿರುವ ಇದೇ ಘಟಕದ ಆರ್.ಅನೂಪ್ ಕುಮಾರ್ ಅವರಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಇದಲ್ಲದೆ, ವಿವಿಧ ರಾಜ್ಯಗಳ ಕಂಪನಿಗಳ ಘಟಕಗಳ ಮುಖ್ಯಸ್ಥರು, ಸಿಬ್ಬಂದಿ ಸೇರಿ ಅನೇಕರು ಹಲವಾರು ಪುರಸ್ಕಾರಗಳಿಗೆ ಪಾತ್ರರಾದರು.
ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಬಿಎಚ್‌ಇಎಲ್ ಕಂಪನಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಕಂಪನಿಯ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದೆ. ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ ದೇಶೀಯ, ವಿದೇಶಿ ಮಟ್ಟದಲ್ಲಿ ಅಪಾರ ಮಟ್ಟದ ಬೇಡಿಕೆಗಳನ್ನು ಗಳಿಸುತ್ತಿರುವ ಕಂಪನಿ ದಕ್ಷತೆ, ಕ್ಷಮತೆಗೆ ಹೆಸರಾಗಿದೆ. ಈ ಹಿನ್ನೆಲೆಯಲ್ಲಿ ಸಚಿವಾಲಯದಿಂದ ಕಂಪನಿಗೆ ಸರ್ವ ಸಹಕಾರ ಕೊಡಲಾಗುವುದು ಎಂದು ಸಚಿವ ಕುಮಾರಸ್ವಾಮಿ ಭರವಸೆ ನೀಡಿದರು.
ಇಂಧನ ಕ್ಷೇತ್ರದ ಜತೆಗೆ ರಕ್ಷಣೆ, ಬಾಹ್ಯಾಕಾಶ ಕ್ಷೇತ್ರಗಳಿಗೆ ಬಿಎಚ್‌ಇಎಲ್ ನಿರ್ಣಾಯಕ ಕೊಡುಗೆ ಕೊಟ್ಟಿದೆ. ದೇಶೀಯ ಆರ್ಥಿಕವಾಗಿ ರಾಷ್ಟ್ರಕ್ಕೆ ಅತಿಹೆಚ್ಚು ಕೊಡುಗೆ ನೀಡುತ್ತಿದೆ ಎನ್ನುವುದು ಹೆಮ್ಮೆಯ ವಿಷಯ. ಮೆಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ಪರಿಕಲ್ಪನೆಗಳ ಅಡಿಯಲ್ಲಿ ಸಮರ್ಥವಾಗಿ ಬಿಎಚ್‌ಇಎಲ್ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಬೆಂಗಳೂರಿನ ಬಿಎಚ್‌ಇಎಲ್ನ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈ ದಿನ ಎರಡು ವರ್ಷಗಳ ಉತ್ಕೃಷ್ಟತಾ ಪುರಸ್ಕಾರ ಸೇರಿ ಇತರೆ ಪುರಸ್ಕಾರಗಳನ್ನು ಆ ಘಟಕ ಪಡೆದುಕೊಂಡಿದೆ. ಇತರೆ ಭಾಗಗಳ ಘಟಕಗಳೂ ಸಾಧನೆಯಲ್ಲಿ ಹಿಂದೆ ಬಿದ್ದಿಲ್ಲ. ಕಂಪನಿಯ ಭವಿಷ್ಯ ಉಜ್ವಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೃಹತ್ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಕಮರನ್ ರಿಜ್ವಿ, ಬಿಎಚ್‌ಇಎಲ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಕೆ.ಸದಾಶಿವ ಮೂರ್ತಿ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು, ಕಂಪನಿಯ ನಿರ್ದೇಶಕರು ಪಾಲ್ಗೊಂಡಿದ್ದರು.