

ಮಂಡ್ಯ: ಜಿಲ್ಲೆಯ ಪ್ರತಿಷ್ಠೆಗೆ ಕಳಂಕ ತಂದಿದ್ದ ಭ್ರೂಣ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಬಯಲಿಗೆಳೆದು ದಂಧೆಕೋರರನ್ನು ಜೈಲಿಗಟ್ಟಿದ ಆರೋಗ್ಯ ಇಲಾಖೆಗೆ ಪ್ರಶಸ್ತಿಯ ಗರಿ ಮುಡಿಗೇರಿದೆ.
ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದಿಂದ ದಂಧೆಗೆ ಕಡಿವಾಣ ಹಾಕುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ‘ಡೆಕಾಯ್ ಪ್ಲಾೃನ್’ ಸೇರಿದಂತೆ ಕೆಲ ತಂತ್ರ ಅನುಸರಿಸಿದ ಪರಿಣಾಮ ನಾಗಲೋಟದಲ್ಲಿ ನಡೆಯುತ್ತಿದ್ದ ಭ್ರೂಣ ಪತ್ತೆ ಹಾಗೂ ಹತ್ಯೆಯನ್ನು ತಡೆಯುವಲ್ಲಿ ಸಫಲವಾಯಿತು. ಈ ಹಿನ್ನೆಲೆಯಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ಕಾಯ್ದೆ(ಪಿಸಿಪಿಎನ್‌ಡಿಟಿ) ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಪ್ರಶಸ್ತಿ ಜತೆಗೆ ಅಭಿನಂದನೆ ಸಿಕ್ಕಿದೆ.
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ದಂಧೆ: ಭ್ರೂಣ ಪತ್ತೆ ದಂಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿತ್ತು. ಪರಿಣಾಮ ಭ್ರೂಣ ಪತ್ತೆಗೆಂದು ಮಂಡ್ಯ ಮಾತ್ರವಲ್ಲದೆ ಮೈಸೂರು, ಬೆಂಗಳೂರು ಭಾಗದಿಂದಲೂ ಬರುತ್ತಿದ್ದರು. ಈ ನಡುವೆ ಬೆಂಗಳೂರಿನಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದು ಜಿಲ್ಲೆಯ ಹೆಸರು ಕೇಳಿಬಂತು. ಬಳಿಕ ವಿಚಾರಣೆ ತೀವ್ರಗೊಳಿಸುತ್ತಾ ಹೋದಂತೆ ಒಂದೊಂದೇ ಪ್ರಕರಣ ಬಯಲಿಗೆ ಬರಲಾರಂಭಿಸಿತು. ಮೊದಲು ಪಾಂಡವಪುರ, ಬಳಿಕ ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭ್ರೂಣ ಪತ್ತೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆಯಲಾಯಿತು. ಆದಾಗ್ಯೂ ದಂಧೆಗೆ ಸಂಪೂರ್ಣ ಕಡಿವಾಣ ಬೀಳಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿತ್ತು.
ಇದಾದ ಕೆಲ ದಿನದಲ್ಲಿ ನಾಗಮಂಗಲ ತಾಲೂಕಿನಲ್ಲಿ ಭ್ರೂಣ ಪತ್ತೆಯ ಮಾಹಿತಿ ಬಂದಿದೆ. ಇಲ್ಲಿ ಆರೋಪಿಗಳನ್ನು ಬಯಲಿಗೆಳೆಯಲು ಆರೋಗ್ಯ ಇಲಾಖೆ ಬಳಸಿದ ತಂತ್ರ ಡೆಕಾಯ್. ಅಂದರೆ ಇಲಾಖೆಯಿಂದಲೇ ಮಹಿಳೆಯೊಬ್ಬರನ್ನು ನೇಮಿಸಿ, ಅವರಿಗೆ ಭ್ರೂಣ ಪತ್ತೆ ಮಾಡುವಂತೆ ಆರೋಪಿಗಳಿಗೆ 20 ಸಾವಿರ ರೂ ಕೊಡಲಾಗಿತ್ತು. ಈ ವೇಳೆ ಭ್ರೂಣ ಪತ್ತೆ ಮಾಡುವ ವೇಳೆಯೇ ಆರೋಪಿಗಳನ್ನು ಪೊಲೀಸರ ಸಹಾಯದಿಂದ ವಶಕ್ಕೆ ಪಡೆದು ಹಣವನ್ನು ಪಡೆದುಕೊಳ್ಳಲಾಗಿತ್ತು.
ಇನ್ನು ಒಟ್ಟಾರೆ ಎಲ್ಲ ಪ್ರಕರಣಕ್ಕೆ ಪೊಲೀಸರು ತನಿಖೆ ನಡೆಸಿದಾಗ ಮಹತ್ವದ ಅಂಶಗಳು ಬೆಳಕಿಗೆ ಬಂದಿದ್ದವು. ಎಗ್ಗಿಲ್ಲದ ನಡೆಯುತ್ತಿದ್ದ ದಂಧೆಯ ಮಾಹಿತಿ ಹೊರಬೀಳುತ್ತಿದ್ದಂತೆ ಎಲ್ಲರೂ ಬೆಚ್ಚಿ ಬೀಳುವಂತಾಗಿತ್ತು. ಭ್ರೂಣ ಪತ್ತೆಯಲ್ಲಿ ಸಕ್ರಿಯರಾಗಿದ್ದ 30ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮಾತ್ರವಲ್ಲದೆ ಲಕ್ಷಾಂತರ ರೂ ಮೌಲ್ಯದ ಸ್ಕಾೃನಿಂಗ್ ಯಂತ್ರ ಹಾಗೂ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
200ಕ್ಕೂ ಹೆಚ್ಚು ಭ್ರೂಣ ಹತ್ಯೆ?
ಹಲವು ವರ್ಷದಿಂದ ದಂಧೆಯನ್ನು ನಿರಾಂತಕವಾಗಿ ನಡೆಸಿಕೊಂಡು ಬರುತ್ತಿದ್ದ ಆರೋಪಿಗಳು, ಈವರೆಗೆ 200ಕ್ಕೂ ಹೆಚ್ಚು ಸ್ಕಾೃನಿಂಗ್ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ಅವರ ಮಾಹಿತಿ ಅಂತಿಮವಲ್ಲ. ಇನ್ನು ಸಾಕಷ್ಟು ಪ್ರಕರಣ ನಡೆದಿವೆ. ಗರ್ಭಪಾತದ ಬಳಿಕ ಭ್ರೂಣವನ್ನು ವೈದ್ಯಕೀಯ ಕಸದೊಂದಿಗೆ ಸೇರಿಸಿ ಕಳುಹಿಸಿದ್ದಾರೆನ್ನುವ ಮಾಹಿತಿ ಇದೆ ಎಂದು ದಂಧೆಯ ಕರಾಳತೆ ಬಗ್ಗೆ ಇತ್ತೀಚೆಗೆ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದರು.
ಪ್ರಮುಖವಾಗಿ ಆರೋಪಿಗಳು ಪರಸ್ಪರ ಸಂಪರ್ಕಿಸಲು ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಬದಲಿಗೆ ಇಂಟರ್‌ನೆಟ್ ಕರೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ತಂಡ ತಾಂತ್ರಿಕ ವಿಧಾನ ಬಳಸಿ ಆರೋಪಿಗಳನ್ನು ಬಂಧಿಸಲಾಗಿತ್ತು. ಗಮನಾರ್ಹ ವಿಷಯವೆಂದರೆ ದಂಧೆಗೆ ಸಂಬಂಧಿಸಿದಂತೆ ಆರೋಪಿಗಳು ಪ್ರತಿ ಜಿಲ್ಲೆಯಲ್ಲಿ ದಂಧೆಯ ನೆಟ್ವರ್ಕ್ ಬೆಳೆಸಿಕೊಂಡಿದ್ದರು. ಮಧ್ಯವರ್ತಿಗಳ ಮೂಲಕ ಗರ್ಭಿಣಿಯರು ಅಥವಾ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದರು. ಪ್ರಾರಂಭದಲ್ಲಿ ಆಸ್ಪತ್ರೆಗಳ ಹಿಂದೆ ನಡೆಯುತ್ತಿದ್ದ ದಂಧೆಯನ್ನು ದಿನಕಳೆದಂತೆ ತೋಟದಮನೆ, ಆಲೆಮನೆಗೆ ವರ್ಗಾಯಿಸಿಕೊಂಡಿದ್ದರು. ಕೆಲವೊಮ್ಮೆ ಒಮಿನಿ ಕಾರ್‌ನಲ್ಲಿ ಸ್ಕಾೃನಿಂಗ್ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಇನ್ನು ಹಿಂದಿನ ಪ್ರಕರಣದಲ್ಲಿ ಜೈಲು ಸೇರಿ ಬಳಿಕ ಜಾಮೀನು ಪಡೆದು ಹೊರಬಂದ ಮೇಲೆ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಗೆ ಡಿಮಾಂಡ್ ಹೆಚ್ಚಾಗಿತ್ತು. ಅದರಿಂದಾಗಿ ಮೊದಲು 8 ರಿಂದ 10 ಸಾವಿರ ರೂ ಪಡೆಯುತ್ತಿದ್ದ ಆರೋಪಿಗಳು, ಇತ್ತೀಚೆಗೆ 25 ಸಾವಿರ ರೂನಿಂದ 30 ಸಾವಿರ ರೂ.ಗೆ ಏರಿಕೆ ಮಾಡಿದ್ದರಂತೆ.
ಭ್ರೂಣ ಪತ್ತೆ ಪ್ರಕರಣ ಜಿಲ್ಲೆಗೆ ಕಳಂಕವಾಗಿತ್ತು. ಎಲ್ಲರೂ ಒಗ್ಗೂಡಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ತನಿಖೆ ಹಂತದಲ್ಲಿ ಸಾಕಷ್ಟು ವಿಷಯ ಹೊರಗೆ ಬಂದವು. ಮುಂದೆಯೂ ಇಂತಹ ಪ್ರಕರಣ ನಡೆಯದಂತೆ ಎಚ್ಚರಿಕೆ ವಹಿಸಲಾಗಿದ್ದು, ಕೆಲವು ಕ್ರಮ ತೆಗೆದುಕೊಳ್ಳಲಾಗಿದೆ.ಡಾ.ಜಿ.ಸಿ.ಬೆಟ್ಟಸ್ವಾಮಿಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ