ಎಸ್‌ಡಿಎಂಸಿ ಪ್ರೇರೆಪಿಸಲು ‘ಪುಷ್ಠಿ’: ಎಂಟು ಸರ್ಕಾರಿ ಶಾಲೆಗೆ ಪ್ರಶಸ್ತಿಯ ಗೌರವ

Award for best SDMC Mandya
Published on

ಮಂಡ್ಯ: ಸರ್ಕಾರಿ ಶಾಲೆಯನ್ನು ಗುಣಾತ್ಮಕ ಶಿಕ್ಷಣ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ)ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರದಿಂದ ‘ಪುಷ್ಠಿ’ ಕಾರ್ಯಕ್ರಮದಡಿ ಪ್ರಶಸ್ತಿ ನೀಡಲಾಗುತ್ತಿದೆ. ಅದರಂತೆ ಜಿಲ್ಲೆಯ ಎಂಟು ಬ್ಲಾಕ್‌ನಿಂದ ಒಂದೊಂದು ಶಾಲೆಯ ಎಸ್‌ಎಂಡಿಸಿ ಈ ಗೌರವಕ್ಕೆ ಪಾತ್ರವಾಗಿದೆ. ವಿದ್ಯಾರ್ಥಿಗಳ ಪಾಲಕರನ್ನು ತೊಡಗಿಸಿಕೊಂಡು ಸರ್ಕಾರ ಶಾಲೆಗಳ ಅಭ್ಯುದಯಕ್ಕೆಂದು ಹಲವು ವರ್ಷದ ಹಿಂದೆ ಎಸ್‌ಎಂಡಿಸಿ ರಚನೆ ಮಾಡಲಾಗಿದೆ. ಈ ಪೈಕಿ ಹಲವು ಶಾಲೆಗಳಲ್ಲಿನ ಸಮಿತಿ ಕಾರ್ಯಚಟುವಟಿಕೆ ಅತ್ಯುತ್ತಮವಾಗಿದೆ. ಇಂತಹ ಸಮಿತಿಯನ್ನು ಮತ್ತಷ್ಟು ಪ್ರೋತ್ಸಾಹಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಅದರಂತೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ 2024-25ನೇ ಸಾಲಿನ ಪುಷ್ಠಿ ಕಾರ್ಯಕ್ರಮದಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಎಸ್‌ಡಿಎಂಸಿಗಳನ್ನು ಆಯ್ಕೆ ಮಾಡಿ 1 ಲಕ್ಷ ರೂ ಅನುದಾನ ರೂಪದ ನಗದು ಬಹುಮಾನ ನೀಡುತ್ತಿದೆ. ಎಂಟು ಶಾಲೆಗೆ ಪುಷ್ಠಿಯ ಗರಿ: ಇಲಾಖೆಯಿಂದ ನೀಡುತ್ತಿರುವ ಮೊದಲ ವರ್ಷದ ಪ್ರಶಸ್ತಿಗೆ ಎಂಟು ಬ್ಲಾಕ್‌ನಿಂದ ಒಂದೊಂದು ಶಾಲೆ ಆಯ್ಕೆಯಾಗಿದೆ. ಕೆ.ಆರ್.ಪೇಟೆ ಬ್ಲಾಕ್‌ನಲ್ಲಿ ಹರಿಹರಪುರ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಮದ್ದೂರಿನಲ್ಲಿ ಯರಗನಹಳ್ಳಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಮಳವಳ್ಳಿಯಲ್ಲಿ ಮಾರೇಹಳ್ಳಿ ಆದರ್ಶ ವಿದ್ಯಾಲಯ, ಮಂಡ್ಯ ಉತ್ತರ ವಲಯದಲ್ಲಿ ಕೀಲಾರ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಮಂಡ್ಯ ದಕ್ಷಿಣ ವಲಯದಲ್ಲಿ ಉಮ್ಮಡಹಳ್ಳಿ ಪ್ರೌಢಶಾಲೆ, ನಾಗಮಂಗಲದಲ್ಲಿ ದೊಡ್ಡಚಿಕ್ಕನಹಳ್ಳಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಪಾಂಡವಪುರದಲ್ಲಿ ಸಣಬದಕೊಪ್ಪಲು ಕಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀರಂಗಪಟ್ಟಣದಲ್ಲಿ ಗಂಜಾನ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗೆ ಪ್ರಶಸ್ತಿ ಒಲಿದುಬಂದಿದೆ. ಆಯ್ಕೆ ಪ್ರಕ್ರಿಯೆ ಹೇಗೆ?: ಪುಷ್ಟಿ ಕಾರ್ಯಕ್ರಮದಡಿ ಅತ್ಯುತ್ತಮ ಎಸ್‌ಡಿಎಂಸಿಗಳನ್ನು ಆಯ್ಕೆ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಜಿಲ್ಲೆಯಿಂದ ಎಲ್ಲ ಸರ್ಕಾರಿ ಶಾಲೆಯಿಂದ ಅರ್ಜಿ ಸಲ್ಲಿಕೆಯಾಗಿದ್ದವು. ಈ ಬಗ್ಗೆ ಪರಿಶೀಲನೆ ಮೂರು ಹಂತದಲ್ಲಿ ತಂಡ ನಿಯೋಜಿಸಲಾಗಿತ್ತು. ಅದರಂತೆ ಮೊದಲು ಬಿಆರ್‌ಸಿ, ಸಿಆರ್‌ಸಿ ಪರಿಶೀಲಿಸಿದ್ದಾರೆ. ತಾಲೂಕು ಹಂತದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ, ಜಿಲ್ಲಾ ಹಂತದಲ್ಲಿ ಡಯಟ್ ಪ್ರಾಂಶುಪಾಲರು ಮೌಲ್ಯಮಾಪನ ಮಾಡಿ ನಡೆಸಿ ರಾಜ್ಯದ ಹಂತಕ್ಕೆ ಕಳುಹಿಸಿಕೊಟ್ಟಿದ್ದಾರೆ. ರಾಜ್ಯಮಟ್ಟದಲ್ಲಿ ಅಂತಿಮವಾಗಿ ಪ್ರತಿ ಬ್ಲಾಕ್‌ಗೆ ಒಂದು ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಆಯ್ಕೆ ಮಾಡಿ ಹೆಸರು ಘೋಷಣೆ ಮಾಡಲಾಗಿದೆ. ಇನ್ನು ಶಾಲೆಯಲ್ಲಿ ಬಿಸಿಯೂಟದ ಗುಣಮಟ್ಟ ಪರಿಶೀಲನೆ, ಗೈರು ಹಾಜರಾದ ಮಕ್ಕಳನ್ನು ಮರಳಿ ಶಾಲೆಗೆ ಬರುವಂತೆ ಮಾಡಲು ನೆರವಾಗುವುದು, ಶಾಲಾ ಶೈಕ್ಷಣಿಕ ಪ್ರವಾಸದ ಜವಾಬ್ದಾರಿ, ಗುಣಾತ್ಮಕ ಶಿಕ್ಷಣ, ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಳ್ಳುವಿಕೆ, ಮಕ್ಕಳ ಕಲಿಕೆಗೆ ಪೂರಕ ಸಹಕಾರ ಒದಗಿಸುವುದು, ಪಾಲಕರ ಸಭೆ, ಶಿಕ್ಷಕರ ಸಭೆ, ಸಮುದಾಯದತ್ತ ಶಾಲೆಯಲ್ಲಿ ಭಾಗವಹಿಸುವುದು, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ನೆರವಾಗುವುದು, ಕ್ರೀಡಾಕೂಟ, ಪ್ರತಿಭಾಕಾರಂಜಿ ಇನ್ನಿತರೆ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು, ಸಂಪನ್ಮೂಲಗಳ ಕ್ರೋಢಿಕರಣದ ಮೂಲಕ ಶಾಲೆಗೆ ಅಗತ್ಯವಿರುವ ಉಪಕರಣಗಳನ್ನು ನೀಡುವುದು, ಶಾಲಾ ಭೌತಿಕ ವಾತಾವರಣ ಉತ್ತಮಗೊಳಿಸುವುದು, ದಾನಿಗಳು, ಹಿರಿಯ ವಿದ್ಯಾರ್ಥಿಗಳ ನೆರವಿನಿಂದ ಶಾಲೆ ಅಭಿವೃದ್ಧಿ ಪಡಿಸುವುದು ಇನ್ನಿತರೆ ಮಾನದಂಡಗಳನ್ನು ಆಧರಿಸಿ ಎಸ್‌ಡಿಎಂಸಿ ಆಯ್ಕೆ ಮಾಡಲಾಗಿದೆ. ಯಾವುದಕ್ಕೆ ಹಣದ ಬಳಕೆ?: ಪುಷ್ಠಿ ಕಾರ್ಯಕ್ರಮದಡಿ ಆಯ್ಕೆಯಾಗಿರುವ ಎಸ್‌ಡಿಎಂಸಿಗಳ ಖಾತೆಗೆ ಈಗಾಗಲೇ ತಲಾ 1 ಲಕ್ಷ ರೂ ಅನುದಾನ ಜಮೆಯಾಗಿದೆ. ಈ ಹಣವನ್ನು ಶಾಲೆಯ ಶೈಕ್ಷಣಿಕ ಚಟುವಟಿಕೆ, ಮೂಲ ಸೌಕರ್ಯವಾದ ಗ್ರಂಥಾಲಯ, ಗಣಕಯಂತ್ರ, ಸ್ಮಾರ್ಟ್ ಬೋರ್ಡ್, ವಿಷಯಾಧಾರಿತ ಇ-ಕಂಟೆಂಟ್, ಕ್ರೀಡಾ ಸಾಮಗ್ರಿ, ಗ್ರೀನ್‌ಬೋರ್ಡ್, ಪ್ರಯೋಗಾಲಯ, ಇಕೋ ಕ್ಲಬ್ ಚಟುವಟಿಕೆ, ಕಲಿಕಾ ಮೇಳ, ಉದ್ಯೋಗ ಮೇಳ, ಇಂಟರ್‌ನೆಟ್ ಸೌಲಭ್ಯ, ಯುಪಿಎಸ್, ಸಿಸಿ ಕ್ಯಾಮರಾ ಮತ್ತು ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುವಂತಹ ಚಟುವಟಿಕೆಗೆ ಬಳಸಿಕೊಳ್ಳಬೇಕು. ಈ ಬಗ್ಗೆ ಎಸ್‌ಎಂಡಿಸಿ ಸಭೆ ನಡೆಸಿ ನಿರ್ಣಯ ಕೈಗೊಂಡು ಕ್ರಿಯಾಯೋಜನೆ ಸಿದ್ಧಪಡಿಸಿ ಬಿಇಒ ಅನುಮೋದನೆ ಪಡೆದು ನಿಯಾಮಾನುಸಾರ ಅನುದಾನ ಬಳಕೆ ಮಾಡಿ ದಾಖಲೆ ಮತ್ತು ವೆಚ್ಚದ ಮಾಹಿತಿ ಒದಗಿಸಬೇಕು. ಪುಷ್ಠಿ ಪ್ರಶಸ್ತಿಗೆ ಆಯ್ಕೆಯಾಗಿರುವ ಅತ್ಯುತ್ತಮ ಎಸ್‌ಡಿಎಂಸಿ ಭೇಟಿ ಹಾಗೂ ಶಾಲೆಗಳಲ್ಲಾಗಿರುವ ಅಭಿವೃದ್ಧಿ ಕಾರ್ಯ ವೀಕ್ಷಣೆ ಮಾಡಲು ಬೇರೆ ಎಸ್‌ಎಂಡಿಸಿಗಳು ಉತ್ಸುಕತೆ ತೋರುತ್ತಿವೆ. ಅದರಂತೆ ಈಗಾಗಲೇ ಕೆಲವರು ಪ್ರಶಸ್ತಿ ಪುರಸ್ಕೃತ ಶಾಲೆಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡಿದ್ದಾರೆ. ಎಸ್‌ಡಿಎಂಸಿ ಸಮಿತಿಯಲ್ಲಿ 18 ಜನ ಪಾಲಕರು(ಅಧ್ಯಕ್ಷ-ಉಪಾಧ್ಯಕ್ಷ), ಪದ ನಿಮಿತ್ತ ಸದಸ್ಯರಾದ ಮುಖ್ಯಶಿಕ್ಷಕ( ಕಾರ್ಯದರ್ಶಿ), ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಸಹಾಯಕಿ, ನಾಮನಿರ್ದೇಶಕ ಸದಸ್ಯರಾದ ನಗರಸಭೆ ಸದಸ್ಯರು, ಹಿರಿಯ ಶಿಕ್ಷಕ, ವಿದ್ಯಾರ್ಥಿ ಇರಲಿದ್ದಾರೆ. ಮೊದಲು ಈ ಸಮಿತಿಗೆ ಶಾಸಕರು ಅಧ್ಯಕ್ಷರಾಗಿದ್ದರು. ಆದರೆ ಮಾನದಂಡ ಬದಲಿಸಿದ ನಂತರ ಮಕ್ಕಳ ಪಾಲಕರಿಗೆ ಅಧಿಕಾರ ನೀಡಲಾಗಿದೆ. ಎಸ್‌ಎಂಡಿಸಿ ಸಮಿತಿ ರಚನೆಗೆ 2006ರಲ್ಲಿ ಅಧಿಸೂಚನೆ ಹೊರಡಿಸಲಾಯಿತು. 2012ರಲ್ಲಿ ನಿಯಮ ಬದಲಾಯಿಸಲಾಯಿತು.

ಶಾಲೆಗೆ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಇದಕ್ಕೆ ಕಾರಣರಾದ ವಿಜಯನಗರ ರೋಟರಿ ಕ್ಲಬ್, ದೊಡ್ಡಮುದ್ದೇಗೌಡ(ಅರುಣ್), ಗ್ರಾಪಂ ಆಡಳಿತ ಮಂಡಳಿ, ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು, ನಮ್ಮ ಶಾಲೆಯ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಸ್‌ಡಿಎಂಸಿಗೆ ಪ್ರಶಸ್ತಿ ಕೊಡುವ ಮೂಲಕ ರಾಜ್ಯಸರ್ಕಾರ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಕೆ.ಎಸ್.ರಮೇಶ್ ಎಸ್‌ಡಿಎಂಸಿ ಅಧ್ಯಕ್ಷೆ ಕೀಲಾರ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಈ ಶೈಕ್ಷಣಿಕ ವರ್ಷದ ಅವಧಿಯೊಳಗೆ ಮೂರು ಪ್ರಶಸ್ತಿ ನಮ್ಮ ಶಾಲೆಗೆ ಒಲಿದುಬಂದಿದೆ. ಎಚ್.ಜಿ.ಗೋವಿಂದೇಗೌಡ ಹಾಗೂ ಡಾ.ಎಚ್.ಡಿ.ಚೌಡಯ್ಯ ಪ್ರಶಸ್ತಿ ಜತೆಗೆ ಇದೀಗ ಉತ್ತಮ ಎಸ್‌ಡಿಎಂಸಿ ಎನ್ನುವ ಗೌರವ ಸಿಕ್ಕಿದೆ. ಇದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸುನಂದಾ ಎಸ್‌ಡಿಎಂಸಿ ಅಧ್ಯಕ್ಷೆ ಉಮ್ಮಡಹಳ್ಳಿ ಪ್ರೌಢಶಾಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net