

ಮಂಡ್ಯ: ಜಿಲ್ಲೆಯ ಪ್ರತಿಷ್ಠಿತ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಡಾ.ವಿ.ಟಿ.ಸುಶೀಲಾ ಜಯರಾಂ ಸಾಂಸ್ಕೃತಿಕ ಟ್ರಸ್ಟ್‌ನಿಂದ ಕೊಡಮಾಡುವ ವೈದ್ಯಕೀಯ ಸೇವಾ ಪ್ರಶಸ್ತಿಗೆ ಮಿಮ್ಸ್ ನಿವೃತ್ತ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್, ಸಾಹಿತ್ಯ ಸೇವಾ ಪ್ರಶಸ್ತಿಗೆ ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಎಂ.ಬಿ.ಸುರೇಶ್ ಮತು ದೇಶ ಸೇವಾ(ಮರಣೋತ್ತರ) ವೀರಯೋಧ ಎಂ.ಪಿ.ಪ್ರಶಾಂತ್ ಅವರಿಗೆ ನೀಡಲಾಗುತ್ತಿದೆ.
ನಗರದ ಗಾಂಧಿಭವನದಲ್ಲಿ ಜು.24ರಂದು ಶತಾಯುಷಿ ಸಾಹಿತಿ ದಿವಂಗತ ಸೀತಾಸುತ ಅವರ 124ನೇ ವರ್ಷದ ಸಂಸ್ಮರಣೆ ಸಮಾರಂಭದಲ್ಲಿ ಮೂವರಿಗೂ ತಲಾ 20 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಡಾ.ಕೆ.ಎಸ್.ಜಯರಾಂ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 11ಗಂಟೆಗೆ ಆಯೋಜಿಸಿರುವ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಎಂ.ಜಿ.ಮಂಜುನಾಥ್ ವಹಿಸಲಿದ್ದು, ನಿವೃತ್ತ ಪ್ರಾಧ್ಯಾಪಕರೂ ಆದ ಸಾಹಿತಿ ಎಂ.ರಾಮಕೃಷ್ಣ ಅವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸೀತಾಸುತ ಅವರನ್ನು ಕುರಿತು ಟ್ರಸ್ಟ್ ಅಧ್ಯಕ್ಷ ಕೆ.ಎಸ್.ದೊರೆಸ್ವಾಮಿ ಮಾತನಾಡುವರು. ಅಂತೆಯೇ ನೃತ್ಯ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಿಸಿದರು. ಟ್ರಸ್ಟ್ ಅಧ್ಯಕ್ಷ ಕೆ.ಎಸ್.ದೊರೆಸ್ವಾಮಿ ಹಾಜರಿದ್ದರು.