

ಮಂಡ್ಯ: ಚಿಂತಕ ಎಚ್.ಎಲ್.ಕೇಶವಮೂರ್ತಿ ಅವರು ಅಕ್ಷರ, ನುಡಿ, ನೆನಪುಗಳ ಮೂಲಕ ನಮ್ಮೊಂದಿಗೆ ಸದಾ ಜೀವಂತವಾಗಿದ್ದಾರೆ ಎಂದು ಕೋಲಾರದ ಸಂಸ್ಕೃತಿ ಚಿಂತಕ, ಹೋರಾಟಗಾರ ಕೋಟಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 5ನೇ ವರ್ಷದ ವೈಚಾರಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕೇಶವಮೂರ್ತಿ ಎಂದರೆ ಒಬ್ಬ ವ್ಯಕ್ತಿಯ ನೆನಪಲ್ಲ. ಅದು ಒಂದು ಬಳಗದ ನೆನಪನ್ನು ಉಂಟು ಮಾಡುತ್ತದೆ ಎಂದರು.
ಯುವ ಪೀಳಿಗೆಗೆ ವರ್ಗಾಯಿಸಬೇಕೆಂದರೂ ಸಾಧ್ಯವಾಗದ ಪರಿಸ್ಥಿತಿ ಇಂದಿನ ಶಿಕ್ಷಣ ಪದ್ಧತಿಯಿಂದ ಉಂಟಾಗಿದೆ. ಮಕ್ಕಳಿಗೆ ಏನು ಕಲಿಸಬೇಕು ಎಂದು ಯೋಚಿಸುತ್ತಿಲ್ಲ. ಈಗಿರುವ ಪಠ್ಯಗಳು ಬೇಕಾ ಎಂಬುದು ಪಾಲಕರಿಗೆ ಗೊತ್ತಾಗುತ್ತಿಲ್ಲ. ಶಿಕ್ಷಣಕ್ಕೂ ಬದುಕಿಗೂ ಸಂಬಂಧವಿಲ್ಲ. ಕುವೆಂಪು, ರಾಜರತ್ನಂ, ಕೈಲಾಸಂ ಮುಂತಾದ ಹಿರಿಯ ಸಾಹಿತಿಗಳು ಮಕ್ಕಳ ಕುರಿತಾಗಿ ಕಟ್ಟಿರುವ ಒಂದು ಪರಂಪರೆಯನ್ನು ಗಮನಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಧ್ಯಾಪಕ ಶಿವಣ್ಣಗೌಡ ಮಾತನಾಡಿ, ಎಚ್‌ಎಲ್‌ಕೆ ಸೌಮ್ಯ ಸ್ವಭಾವದ ವ್ಯಕ್ತಿ. ಪ್ರಚಾರ ಪ್ರಿಯರಲ್ಲ. ವ್ಯವಸ್ಥೆಯ ವಿರುದ್ಧದ ಅವರ ಪ್ರತಿರೋಧ ಕಹಿಗುಳಿಗೆಯಂತೆ ಇತ್ತು. ಅವರದು ಹೆಂಗರುಳಿನ ಗುಣವಾಗಿತ್ತು. ನಿಜಾರ್ಥದಲ್ಲಿ ಅವರೊಬ್ಬ ಜಾತ್ಯತೀತವಾದಿಗಳಾಗಿದ್ದರು ಎಂದು ಬಣ್ಣಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು. ರೈತ ನಾಯಕಿ ಸುನಂದಾ ಜಯರಾಂ, ಲೇಖಕ ಡಾ.ಜಗದೀಶ ಕೊಪ್ಪ, ಕೆ.ಬೋರಯ್ಯ, ಎಸ್.ಪೂರ್ಣಚಂದ್ರ ಉಪಸ್ಥಿತರಿದ್ದರು. ಇದೇ ವೇಳೆ ಕೋಟಗಾನಹಳ್ಳಿ ರಾಮಯ್ಯ ಅವರಿಗೆ 10 ಸಾವಿರ ರೂ. ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.