ಸಾಹಿತಿಗಳು ಸಮಾಜದ ದೊಂಕನ್ನು ತಿದ್ದಲಿ: ಕಸಾಪ ಮಾಜಿ ಅಧ್ಯಕ್ಷ ಪ್ರೊ.ಎಚ್.ಎಸ್.ಮುದ್ದೇಗೌಡ ಸಲಹೆ

3
Published on

ಮಂಡ್ಯ: ಸಾಹಿತಿಗಳು ಜನರಿಗೆ ಖುಷಿಯಾಗುವ ಹಾಗೆ ಬರೆಯುವ ಜತೆಗೆ ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು. ಆಗ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ಎಚ್.ಎಸ್.ಮುದ್ದೇಗೌಡ ಹೇಳಿದರು.

ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ಸಭಾಂಗಣಲ್ಲಿ ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಪುಸ್ತಕಗಳ ಲೋಕಾರ್ಪಣೆ, ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಡ್ಯದ ಸರಳ ಮತ್ತು ಸಜ್ಜನಿಕೆಯ ರಾಜಕಾರಣಿ ಎಂ.ಎಸ್.ಆತ್ಮಾನಂದ ಅವರು ತಮ್ಮ ರಾಜಕೀಯ ಜಂಜಾಟದಿಂದ ಹೊರಬಂದು ’ನಮ್ಮ ಮಂಡ್ಯ’ ಪುಸ್ತಕ ರಚಿಸಿರುವುದು ಅಭಿನಂದನಾರ್ಹ. ಮಕ್ಕಳಿಗೆ ಸಾಹಿತ್ಯ ಪರಿಚಯಿಸುವ ಅಗತ್ಯವಿದೆ ಎಂದರು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿ, ಶಿಕ್ಷಣ ಕ್ಷೇತ್ರದ ಆಧಾರ ಸ್ತಂಭಗಳಾಗಿರುವ ಗುರುಗಳ ಸೇವೆ ಮತ್ತು ತ್ಯಾಗ ಗಮನಾರ್ಹ. ಮಕ್ಕಳನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕರೆದೊಯ್ಯುವ ಜತೆಗೆ ಉತ್ತಮ ಸಾಹಿತ್ಯ, ಸಂಸ್ಕೃತಿ, ಸಂಸ್ಕಾರ ಕಲಿಸಿ, ಜ್ಞಾನ ನೀಡುವ ಗುರುಗಳು ಸಮಾಜದಲ್ಲಿ ನಿತ್ಯ ಪರಮಪೂಜ್ಯನೀಯರು ಎಂದರು.

ಸಮಾರಂಭವನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ್ ಉದ್ಘಾಟಿಸಿದರು. ಸಾಹಿತಿ ಡಾ.ಎಸ್.ಶ್ರೀನಿವಾಸ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದ ಅಧ್ಯಕ್ಷ ರಾಮಕೃಷ್ಣ, ಲೇಖಕಿ ಎಚ್.ಆರ್.ಕನ್ನಿಕಾ ಇದ್ದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅವರ ನಮ್ಮ ಮಂಡ್ಯ ಹಾಗೂ ಎಚ್.ಆರ್.ಕನ್ನಿಕಾ ಅವರ ಅನರ್ಘ್ಯ ರತ್ನಗಳು ಪುಸ್ತಕಗಳನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್ ಲೋಕಾರ್ಪಣೆಗೊಳಿಸಿದರು. ಮಿಮ್ಸ್ನ ನಿವೃತ್ತ ಪಿಆರ್‌ಒ ಚ.ಮ.ಉಮೇಶ್ ಬಾಬು, ಪ್ರಕಾಶಕ ಎಂ.ಎಸ್.ಕಾರ್ತಿಕ್, ಚಂದಗಾಲು ಪಿಡಿಒ ಡಾ.ಅಶ್ವಿನಿ, ಪತ್ರಕರ್ತ ಎಸ್.ನಾರಾಯಣಸ್ವಾಮಿ ಅವರಿಗೆ ಕನ್ನಿಕಶಿಲ್ಪ ಸಮಾಜಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net